ಬಿಎಸ್‌ವೈ ನೇತೃತ್ವದ ಸರಕಾರ: ಸೋಮವಾರ ನೂತನ ಸಚಿವರ ಪ್ರಮಾಣವಚನ?

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡು ಮೂರು ವಾರಗಳು ಕಳೆದಿವೆ. ಕೊನೆಗೂ ಸಚಿವ ಸಂಪುಟ ರಚನೆಗೆ ಕಾಲ ಕೂಡಿಬಂದಂತಿದೆ.

ಕಳೆದ ರಾತ್ರಿ ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪನವರು ಇಂದು ಅಥವಾ ನಾಳೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆಗೆ ಅಂತಿಮ ಒಪ್ಪಿಗೆ ಪಡೆಯಲಿದ್ದಾರೆ. ಯಡಿಯೂರಪ್ಪನವರು ಅಂದುಕೊಂಡಂತೆ ನಡೆದರೆ ನೂತನ ಸಚಿವ ಸಂಪುಟ ಸೋಮವಾರ 16 ಹೊಸ ಸಚಿವರುಗಳೊಂದಿಗೆ ರಚನೆಯಾಗಲಿದೆ.

ಜಾತಿ, ಪ್ರದೇಶವಾರು ಮತ್ತು ಪಕ್ಷದ ನಿಷ್ಠಾವಂತರನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ, ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ್ಯತೆಯಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಪಕ್ಷದ ಆಂತರಿಕ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳು ನಿಜವಾದರೆ ಮೊದಲ ಬಾರಿಗೆ ಶಾಸಕರಾದವರು ಮತ್ತು ಮಹಿಳೆಯರಿಗೆ ಮೊದಲ ಬಾರಿಯ ಸಂಪುಟ ರಚನೆಯಲ್ಲಿ ಸಚಿವ ಸ್ಥಾನದ ಅವಕಾಶ ಸಿಗುವುದಿಲ್ಲ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೆಸರು ಸಂಭಾವ್ಯ ಪಟ್ಟಿಯಲ್ಲಿದ್ದರೂ ಕೂಡ ಈ ಬಗ್ಗೆ ಯಡಿಯೂರಪ್ಪನವರು ತೀರ್ಮಾನಿಸಿಲ್ಲ.

ಬೆಂಗಳೂರಿನಿಂದ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್, ಮಲ್ಲೇಶ್ವರ ಶಾಸಕ ಡಾ ಅಶ್ವಥನಾರಾಯಣ, ಆರ್ ಅಶೋಕ್ ಮತ್ತು ಅರವಿಂದ ಲಿಂಬಾವಳಿ ಅವರ ಹೆಸರುಗಳು ಅಂತಿಮವಾದಂತಿದೆ. ಗೋವಿಂದ ಕಾರಜೋಳ, ಕೆ ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಶ್ರೀರಾಮುಲು ಅವರು ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದು ಹಿಂದುಳಿದ ವರ್ಗಗಳ ಸಚಿವ ಸ್ಥಾನ ಸುಳ್ಯ ಕ್ಷೇತ್ರದ ಶಾಸಕ ಎಸ್ ಅಂಗಾರ ಅವರಿಗೆ ಸಿಗುವ ಸಾಧ್ಯತೆಯಿದೆ.

ರಾಜ್ಯದ ಹಿರಿಯ ಬಿಜೆಪಿ ನಾಯಕರ ಒಪ್ಪಿಗೆ ಪಡೆದು ಪಟ್ಟಿ ಸಿದ್ದಪಡಿಸಲಾಗಿದ್ದು ಅಮಿತ್ ಶಾ ಅವರು ಈ ಪಟ್ಟಿಗೆ ಹೆಚ್ಚಿನ ಬದಲಾವಣೆ ಮಾಡದೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ವಿಧಾನಪರಿಷತ್ತಿನ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂಂದ ವೈಎ ನಾರಾಯಣಸ್ವಾಮಿ, ಎನ್ ರವಿಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!