ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಒಂದಿಂಚು ಭೂಮಿ ನೀಡಬಾರದು: ಪುರಿ ಸ್ವಾಮೀಜಿ

ಉಡುಪಿ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಒಂದಿಂಚು ಭೂಮಿ ಕೊಡುವುದಕ್ಕೂ ನನ್ನ ಸಹಮತ ಇಲ್ಲ ಎಂದು ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಉಡುಪಿಗೆ ಭೇಟಿ ನೀಡಿದ ಸಂದರ್ಭ ತಮ್ಮ ಅಭಿಪ್ರಾಯ ತಿಳಿಸಿದರು.

ಬುಧವಾರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸುತ್ತಾ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ೫ ಎಕರೆ ಭೂಮಿ ಪಡೆದು ಮೆಕ್ಕಾ ನಿರ್ಮಿಸುವ ಹುನ್ನಾರ ನಡೆಯುತ್ತಿದೆ. ಶಾಂತಿಯ ಹೆಸರಿನಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಮೂವರು ಮುಸ್ಲಿಮರನ್ನು ರಾಷ್ಟ್ರಪತಿಗಳನ್ನಾಗಿ, ತಲಾ ಒಬ್ಬರು ಗೃಹ ಮಂತ್ರಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಲಾಗಿದೆ. ಈಗ ನ್ಯಾಯಾಲಯದ ಮೂಲಕ ಅಯೋಧ್ಯೆಯನ್ನು ಕಬಳಿಸಲು ಹೊರಟಿರುವುದು ಸರಿಯಲ್ಲ. ಹಿಂದೂಗಳ ಉದಾರತೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು ಹೇಳಿದರು.

ಸುಪ್ರೀಂಕೋರ್ಟ್‌ಗಿಂತಲೂ ಸಂಸತ್ತು ದೊಡ್ಡದು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ನಿಜವಾದ ದೇಶಭಕ್ತಿ ಇದ್ದರೆ ಸುಪ್ರೀಂಕೋರ್ಟ್ ತೀರ್ಪನ್ನು ತಿರಸ್ಕರಿಸಿ, ರಾಮಜನ್ಮಭೂಮಿಯಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು? ಎಂದರು.

ಸುಪ್ರಿಂಕೋರ್ಟ್‌ಗಿಂತಲೂ ನಮ್ಮಂತಹ ಸಂತರು ದೊಡ್ಡವರು, ನಾವೆಲ್ಲರೂ ನ್ಯಾಯಾಧೀಶರಂತೆ. ಸಂವಿಧಾನದ ಹೆಸರಿನಲ್ಲಿ ಎಲ್ಲವನ್ನೂ ಪಾಲಿಸುತ್ತಾ ಹೋದರೆ, ವರ್ಣಾಶ್ರಮ ಧರ್ಮವನ್ನು ಪಾಲಿಸುವವರು ಯಾರು ಎಂದು ನಿಶ್ಚಲಾನಂದ ಸ್ವಾಮೀಜಿ ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!