ಅಮೆರಿಕದಲ್ಲಿ ದ್ವೀಪ ಖರೀದಿಸಿ ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ!

ಬೆಂಗಳೂರು: ಇತ್ತೀಚಿಗಷ್ಟೇ ದೇಶ ತೊರೆದ ಅತ್ಯಾಚಾರ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಈಗ ಅಮೆರಿಕದಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಹೊಸ ದೇಶವನ್ನೇ ಕಟ್ಟಲು ಹೊರಟಿದ್ದಾರೆ.

ವರದಿಗಳ ಪ್ರಕಾರ, ನಾಪತ್ತೆಯಾಗಿರುವ ನಿತ್ಯಾನಂದ ಈಗ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‌ಪೋರ್ಟ್‌‌‌‌ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾರೆ.

ಟ್ರಿನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಇವರ ಕೈಲಾಸ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ನಿತ್ಯಾನಂದ ಸ್ವಘೋಷಣೆ ಮಾಡಿದ್ದಾರೆ.

ಈ ದೇಶಕ್ಕೆ ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದಾನೆ.

ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರಿಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.

ಕೈಲಾಸದ ಪಾಸ್‍ಪೋರ್ಟಿನ ಎರಡು ಮಾದರಿಗಳು ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, ಮಾ ಎಂಬ ಹೆಸರಿನವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾನೆ. ಅಲ್ಲದೆ ಈ ದೇಶದಲ್ಲಿ ನಿತ್ಯಾನಂದ ಪ್ರತಿ ದಿನ ಸಚಿವ ಸಂಪುಟ ಸಭೆ ನಡೆಸುತ್ತಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೈಲಾಸದ ಕಾನೂನು ತಂಡ ಈ ಜಾಗವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಘೋಷಣೆ ಮಾಡಲು ವಿಶ್ವಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲಿದೆ. ಈ ಅರ್ಜಿಯಲ್ಲಿ ಭಾರತದಲ್ಲಿ ನನಗೆ ಬೆದರಿಕೆ ಇದೆ. ಹೀಗಾಗಿ ಇಲ್ಲಿ ನೆಲೆಸಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!