ದೆಹಲಿ: ಗಾಳಿಪಟ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವು

ನವದೆಹಲಿ: ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿರುವಾಗ ನಿಷೇಧಿತ ಚೀನಾ ಮಾಂಜಾ(ಗಾಳಿಪಟದ ದಾರ) ಗಂಟಲಿಗೆ ಸಿಲುಕಿ 32 ವರ್ಷದ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ.

ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ದಿನ ಈ ಘಟನೆ ನಡೆದಿದೆ. ದೆಹಲಿಯ ಬುದ್ಧ ವಿಹಾರದ ಮಾನವ್ ಶರ್ಮಾ ಎಂದು ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ.

ಮೊನ್ನೆ ರಕ್ಷಾ ಬಂಧನ ದಿನ ತನ್ನ ಸೋದರಿಯನ್ನು ಭೇಟಿ ಮಾಡಲೆಂದು ಮಾನವ್ ಶರ್ಮಾ ಪಶ್ಚಿಮ್ ವಿಹಾರಕ್ಕೆ ತೆರಳಿದ್ದರು. ದಾರಿಯಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಮರದಲ್ಲಿ ನೇತಾಡಿಕೊಂಡಿದ್ದ ಗಾಳಿಪಟದ ದಾರ ಕೊರಳಿಗೆ ಸಿಲುಕಿ ಹರಿತವಾಗಿದ್ದರಿಂದ ಗಂಟಲು ಮುರಿದಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಗುರುವಾರ ಇಂತಹ ನಿಷೇಧಿತ ಚೀನಾ ಮಾಂಜಾ ಗಾಳಿಪಟದ ದಾರ ಸಿಲುಕಿ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಗ್ಲಾಸ್ ಲೇಪಿತ ಗಾಳಿಪಟ ಬಳಕೆ ಮನುಷ್ಯರು, ಪ್ರಾಣಿ ಮತ್ತು ಪಕ್ಷಿಗಳಿಗೆ ಅಪಾಯವಾಗಿದ್ದು ಅದಕ್ಕೆ ದೇಶಾದ್ಯಂತ ನಿಷೇಧ ಹೇರಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!