ಮೂಲ್ಕಿ: ಸೌದಿಯಿಂದ ಹತ್ತಿ ತುಂಬಿದ ಎಂಜಿನಿಯರ್ ಮೃತ ದೇಹ ಬಂತು!
ಉಡುಪಿ: ಸೌದಿ ಅರೇಬಿಯಾದ ಜೈಲೊಂದರಲ್ಲಿ ಸೆರೆವಾಸ ಅನುಭವಿಸುತಿದ್ದಾಗಲೇ ಮರಣ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಎಂಜಿನಿಯರ್ ಜೋನ್ ಮೊಂತೇರೊ (54) ಅವರ ಪಾರ್ಥಿವ ಶರೀರ ಸುಮಾರು ಒಂಬತ್ತು ತಿಂಗಳ ನಂತರ ಭಾರತಕ್ಕೆ ತರಲಾಗಿದೆ. ದುರಂತವೆಂದರೆ ತಾನೇಕೆ ಶಿಕ್ಷೆಅನುಭವಿಸುತಿದ್ದೇನೆ, ತಾನು ಮಾಡಿದ ಅಪರಾಧವೇನು ಎಂದು ಕೊನೆಯವರೆಗೂ ಅವರಿಗಾಗಲಿ ಅವರ ಕುಟುಂಬಕ್ಕಾಗಲಿ ತಿಳಿಯಲೇ ಇಲ್ಲ. ಇದೀಗ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಾನೂನು ಹೋರಾಟ ಮಾಡಲು ಸಿದ್ದತೆ ನಡೆಸಿದೆ.
ಘಟನೆಯ ವಿವರ:
ಜೋನ್ ಮೊಂತೇರೊ ಮೂಲತಃ ದಕ್ಷಣ ಕನ್ನಡ ಜಿಲ್ಲೆಯ ಮೂಲ್ಕಿಯವರು. ಪ್ರಾರಂಭಿಕ ಶಿಕ್ಷಣವನ್ನು ಮೂಲ್ಕಿಯಲ್ಲಿಯೇ ಮುಗಿಸಿದ ಜೋನ್ ಮುಂಬೈಗೆ ತೆರಳಿ ಸ್ವತಃ ದುಡಿದು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾಗಳಿಸಿದರು. ಅದೇ ವೇಳೆ ಏರ್‌ಕಂಡಿಶನ್ ನಿರ್ವಹಣೆಯಲ್ಲೂ ವಿಶೇಷ ಪರಿಣಿತಿ ಗಳಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಅಬುದಾಬಿ ಪೆಟ್ರೋಲಿಯಂ ರಿಫೈನರಿಯೊಂದರಲ್ಲಿ ದುಡಿದು ಗಳಿಸಿದ ಹಣದಿಂದ ತನ್ನ ಮೂವರು ಸಹೋದರಿಯರ ಮದುವೆಗೂ ಸಹಕರಿಸಿದರು.
90 ರ ದಶಕದಲ್ಲಿ ಜೋನ್‌ದುಡಿಯುತಿದ್ದ ರಫೈನರಿ ಬೆಂಕಿದುರಂತಕ್ಕೀಡಾದಾಗ ಅನೇಕ ಭಾರತೀಯರೊಂದಿಗೆ ಜೋನ್ ಕೂಡಾ ಉದ್ಯೋಗ ಕಳೆದುಕೊಂಡರು. ಉಪಾಯವಿಲ್ಲದೆ ಭಾರತಕ್ಕೆ ಹಿಂದಿರುಗಿ ದಿಲ್ಲಿಯ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗಿಯಾದರು. ಸುಮಾರು ಎಂಟು ವರ್ಷಗಳ ಕಾಲ ದಿಲ್ಲಿಯಲ್ಲಿದ್ದಾಗ ಅಮೀನಾ ಎಂಬವಳೊಂದಿಗೆ ಮದುವೆಯಾಗಿ ಕರೀಶ್ಮಾ(ಹೆಣ್ಣು) ಹಾಗೂ ನಿರ್ಮಾಣ(ಗಂಡು) ಎಂಬ ಮಕ್ಕಳನ್ನೂ ಪಡೆದರು.
ಹೆಂಡತಿ ಮಕ್ಕಳನ್ನು ದಿಲ್ಲಿಯ ಬಾಡಿಗೆ ಮನೆಯೊಂದರಲ್ಲಿ ಬಿಟ್ಟು 2003ರಲ್ಲಿ ಪುನಃ ಸೌದಿಅರೇಬಿಯಾಗೆ ತೆರಳಿದ ಜೋನ್ ತನ್ನ ಕಠಿಣ ಹಾಗೂ ಪ್ರಮಾಣಿಕ ದುಡಿಮೆಯಿಂದ ಸಾಕಷ್ಟು ಹೆಸರು ಹಾಗೂ ಹಣಗಳಿಸಿದರು. ಕ್ರಮೇಣ ಸ್ವತಂತ್ರವಾಗಿ ಅನೇಕ ಕಟ್ಟಡ ಹಾಗೂ ಕಂಪೆನಿಗಳಲ್ಲಿ ಏರ್ ಕಂಡಿಶನ್ ನಿರ್ವಾಹಣಾ ಕಾಂಟ್ರಾಕ್ಟುಗಳನ್ನೂ ಪಡೆದರು. ಸಾಕಷ್ಟು ಕೆಲಸದ ಒತ್ತಡಗಳಿದ್ದರೂ ವಾರಕ್ಕೊಮ್ಮೆ ತಪ್ಪದೇ ಹೆಂಡತಿ ಮಕ್ಕಳನ್ನೂ ಸಂಪರ್ಕಿಸುತಿದ್ದರು. ನಿಯಮಿತವಾಗಿ ಹಣವನ್ನೂ ಕಳುಹಿಸುತ್ತಿದ್ದುದರಿಂದ ಮಕ್ಕಳಿಗೆ ಪ್ರತಿಷ್ಟಿತ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವುದೂ ಸಾಧ್ಯವಾಯಿತು.
೨೦೧೪ರ ಜೂನ್ ತಿಂಗಳಲ್ಲಿ ಒಮ್ಮಿಂದೊಮ್ಮೆಯೇ ಜೋನ್ ನಾಪತ್ತೆಯಾಗಿದ್ದರು. ಹಲವಾರು ದಿನಗಳ ಕಾಲ ಅಮೀನಾ ಮತ್ತು ಮಕ್ಕಳು ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾದವು. ಅವರ ಅಪ್ತ ಸ್ನೇಹಿತರಿಗೂ ಅವರೆಲ್ಲಿದ್ದಾರೆ ಎಂದು ತಿಳಿದಿರಲಿಲ್ಲ. ಭಾರತೀಯ ದೂತಾವಾಸದಿಂದ ಯಾವುದೇ ಸಹಕಾರ ಸಿಗಲಿಲ್ಲ.
ಅನಿರೀಕ್ಷಿತವಾಗಿ ಜೈಲು ಸೇರಿದರು.
ಕೊನೆಗೊಮ್ಮೆ ಜೋನ್‌ರವರೇ ಹೆಂಡತಿಯನ್ನು ಮೋಬೈಲ್ ಮೂಲಕ ಸಂಪರ್ಕಿಸಿ ತಾನು ಜೈಲಿನಲ್ಲಿರುವುದಾಗಿ ತಿಳಿಸಿದರು. ಜೈಲಿನಲ್ಲಿದ್ದ ಏರ್ ಕಂಡಿಶನ್ ಒಂದನ್ನು ರಿಪೇರಿ ಮಾಡಲು ಬಂದಿದ್ದ ತನ್ನನ್ನು ಬಂಧಿಸಲಾಗಿದೆ, ಆದರೆ ಯಾವ ಕಾರಣಕ್ಕಾಗಿ ಎಂಬುದು ತನಗೆ ತಿಳಿದಿಲ್ಲವೆಂದರು.
ಅನಂತರದ ಅನೇಕ ವಾರಗಳವರೆಗೆ ಅದು ಯಾವ ಊರಿನ ಜೈಲು ಎಂಬುದೂ ಅವರಿಗೆ ತಿಳಿಯಲಿಲ್ಲ. ಕೊನೆಗೊಮ್ಮೆ ಅದು ಸೌದಿಯ ರಾಜಧಾನಿ ರಿಯಾದ್‌ನಿಂದ ೩೫೦ ಕಿ.ಮಿ ದೂರವಿರುವ ಅಲ್-ದುವಾದ್ಮಿ ಎಂಬ ಸಣ್ಣ ಪಟ್ಟಣದಲ್ಲಿರುವ ಜೈಲು ಎಂದು ತಿಳಿಯಿತು. ಪ್ರತಿ ವಾರವೂ ಜೈಲಿನಿಂದ ಹೆಂಡತಿ ಮಕ್ಕಳನ್ನು ಸಂಪರ್ಕಿಸುತಿದ್ದ ಜೋನ್ ತಾನು ಸೌಖ್ಯದಲ್ಲಿದ್ದೇನೆ, ತನ್ನ ಮೇಲಿರುವ ಆಪಾದನೆಗಳ ಕುರಿತು ಪೊಲೀಸರಲ್ಲೇ ಅಸ್ಪಷ್ಟತೆ ಇರುವುದರಿಂದ ತಾನು ಆದಷ್ಟು ಶ್ರೀಘ್ರವಾಗಿ ಬಿಡುಗಡೆಯಾಗಲಿದ್ದೇನೆ ಎಂದು ಸಮಾಧಾನ ಪಡಿಸುತ್ತಿದ್ದರು.
ಅದಾಗಿ ನಾಲ್ಕಾರು ತಿಂಗಳುಗಳು ಕಳೆದರೂ ಅವರ ಬಿಡುಗಡೆಯಾಗಲಿಲ್ಲ. ತನ್ನನ್ನು ತನಿಖೆಗಾಗಿ ನ್ಯಾಯಲಯಕ್ಕಾದರೂ ಒಪ್ಪಿಸಿರಿ ಎಂದು ಮಾಡಿದ ಅನೇಕ ಮನವಿಗಳು ವ್ಯರ್ಥವಾದವು. ಭಾರತೀಯ ದೂತಾವಾಸವನ್ನು ಸಂಪರ್ಕಿಸಿದರೂ ಯಾವ ಸಹಕಾರವೂ ಸಿಗಲಿಲ್ಲ. ತನ್ನ ಸ್ನೇಹಿತರನ್ನು ಕಾಣುವ ಅವಕಾಶವನ್ನೂ ನಿರಾಕರಿಸಲಾಯಿತು.
ನ್ಯಾಯಲಯಗಳ ವಿಚಿತ್ರ ನಡವಳಿಕೆ.
ಕೊನೆಗೊಮ್ಮೆ, ಕೆಲಪೊಲೀಸರು ಬಂದು ಅದಾವುದೋ ಒಂದು ನ್ಯಾಯಲಯಕ್ಕೆ ಕೊಂಡೊಯ್ದುರು. ನ್ಯಾಯಲಯದ ಸಿಬಂಧಿಯೋರ್ವ ಅರೆಬಿಕ್ ಭಾಷೆಯಲ್ಲಿದ್ದ ಆಪಾದನಾಪಟ್ಟಿಯನ್ನು ಓದಿದ. ಅದೇನೆಂದು ಜೋನ್‌ಗೆ ಅರ್ಥವಾಗಲೇ ಇಲ್ಲ. “ನನಗೆ ಅರೆಬಿಕ್ ಭಾಷೆ ತಿಳಿದಿಲ್ಲ ನನ್ನ ಮೇಲಿರುವ ಅಪಾದನೆಗಳು ಏನೆಂದು ನನಗೆ ಅರ್ಥವಾಗಿಲ್ಲ. ನನ್ನ ವಿಚಾರಗಳನ್ನು ನಿವೇದಿಸಲು ಇಂಗ್ಲಿಷ್ ಭಾಷೆ ತಿಳಿದ ವಕೀಲರೋರ್ವರನ್ನಾದರೂ ಕೊಡಿ” ಎಂದು ಜೋನ್ ನ್ಯಾಯಲಯಕ್ಕೆ ಮಾಡಿದ ಮನವಿಗಳೆಲ್ಲ ತಿರಸ್ಕೃತವಾದವು. ಅಲ್ಲಿ ಅರೆಬಿಕ್ ಭಾಷೆಯಲ್ಲಿದ್ದ ಕೆಲದಾಖಲೆಗಳನ್ನು ತೋರಿಸಿ ಸಹಿಹಾಕಲು ಹೇಳಲಾಯಿತು. ಸಹಿಹಾಕಲು ಜೋನ್ ನಿರಾಕರಿಸಿದರು.
ಅದೇದಿನ ಸಂಜೆ ಜೈಲು ಸಿಂಬಂಧಿಯೋರ್ವ ಜೋನ್ ಬಂಧಿಯಾಗಿದ್ದ ಸೆಲ್‌ಗೆ ಬಂದು “ನಿಮಗೆ ಐದು ವರ್ಷ ಜೈಲು ವಾಸದ ಸಜೆವಿಧಿಸಲಾಗಿದೆ” ಎಂದು ತಿಳಿಸಿದಾಗ ಜೋನ್ ಅಲ್ಲಿಯೇ ಕುಸಿದರು.
ಕೋರ್ಟ್ ಆದೇಶದ ಪ್ರತಿಯೂ ಸಿಗಲಿಲ್ಲ.
“ನನ್ನ ಮೇಲಿರುವ ಆಪಾದನೆಗಳನ್ನು ತಿಳಿಯಲು ಇಂಗ್ಲಿಷ್ ಭಾಷೆಯಲ್ಲಿರುವ ದಾಖಲೆಗಳನ್ನಾದರೂಕೊಡಿ. ಕೋರ್ಟ್ ಆದೇಶದ ಪ್ರತಿಯನ್ನಾದರೂಕೊಡಿ” ಎಂಬ ಮನವಿಗಳೂ ತಿರಸ್ಕೃತವಾದವು. ಆದೇಶದ ಪ್ರತಿಸಿಗದೇ ಮೇಲ್ಮನವಿ ಸಲ್ಲಸುವುದು ಸಾಧ್ಯವೇ ಇರಲಿಲ್ಲ. ಅದಕ್ಕಾಗಿ ಯಾರನ್ನೂ ಸಂಪರ್ಕಿಸಬೇಕು ಎನ್ನುವುದೂ ತಿಳಿಯಲಿಲ್ಲ. ನ್ಯಾಯಾಲಯ ನೀಡಿದ ಶಿಕ್ಷೆ ಅನುಭವಿಸುವುದನ್ನು ಬಿಟ್ಟು ಅವರಿಗೆ ಬೇರಾವ ದಾರಿಯೂ ಇರಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದ ಮೇಲೆ ಈ ವಿಚಾರವನ್ನು ಹೆಂಡತಿ ಅಮೀನಾಳಿಗೆ ತಿಳಿಸಲು ಸಾಧ್ಯವಾಯಿತು.
ಇತ್ತ ದಿಲ್ಲಿಯಲ್ಲಿ ಅಮೀನಾ ಹಾಗೂ ಮಕ್ಕಳಿಗೆ ಜೀವನ ಸಾಗಿಸುವುದೇ ಕಷ್ಟವಾಯಿತು. ರೆಸ್ಟೋರೆಂಟ್‌ಗಳಲ್ಲಿ ಚಿಕ್ಕ ಪುಟ್ಟ ಕೆಲಸಮಾಡಿ ಅಲ್ಪ ಸ್ವಲ್ಪ ಗಳಿಸುತ್ತಿದ್ದರು. ಮುಂದಿನ ನಾಲ್ಕು ವರ್ಷಗಳ ಕಾಲ ಜೋನ್ ಜೈಲಿನಲ್ಲಿ ಕೂಲಿಮಾಡಿ ಗಳಿಸಿದ್ದನ್ನೆಲ್ಲ ಸೇರಿಸಿ ಆರು ತಿಂಗಳಿಗೊಮ್ಮೆ ಹೆಂಡತಿಗೆ ಹಣ ಕಳುಹಿಸುತಿದ್ದರು. ಜೈಲಿನಿಂದ ನೇರವಾಗಿ ಹಣಕಳುಹಿಸುವಂತಿರಲಿಲ್ಲ ಬದಲಾಗಿ ಸಂದರ್ಶನಕ್ಕೆಂದು ಜೈಲಿಗೆ ಭೇಟಿನೀಡುವ ಸ್ಥಳೀಯ ಖೈದಿಗಳ ಸಂಬಂಧಿಕರ ಮೂಲಕವೇ ಹಣ ಕಳುಹಿಸಬೇಕಾಗಿತ್ತು. ಆಗೊಮ್ಮೆ ಈಗೊಮ್ಮೆ ಫೋನ್ ಮೂಲಕ ಕುಟುಂಬದವರನ್ನೂ ಸಂಪರ್ಕಿಸುವ ಅವಕಾಶವೂ ಸಿಕ್ಕಿತು.
ಅನಾರೋಗ್ಯಕ್ಕೆ ಒಳಗಾದ ಜೋನ್ ಮೊದಮೊದಲು ಜೋನ್ ಅವರೊಂದಿಗೆ ಚೆನ್ನಾಗಿಯೇ ವ್ಯವಹರಿಸುತಿದ್ದ ಜೈಲು ಸಿಬಂಧಿ ಬರಬರುತ್ತಾ ನಿರ್ದಯರಾಗಿ ವರ್ತಿಸಲು ಪ್ರಾರಂಭಿಸಿದರು. ಆಗಾಗ ಕೊರಡೇಟಿನ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಕೆಲವೊಮ್ಮೆ ಹೊಡೆತಗಳನ್ನು ಸಹಿಸಲಾರದೇ ಪ್ರಜ್ಞೆತಪ್ಪಿದ ಘಟನೆಗಳೂ ನಡೆದವು. ಈ ಎಲ್ಲ ಘಟನೆಗಳಿಂದಾಗಿ ಜೋನ್‌ರವರ ಆರೋಗ್ಯ ಹಾಳಾಗತೊಡಗಿತು. ಆಗಾಗ ಜ್ವರ ಭಾಧಿಸ ತೊಡಗಿತು. ಹಾಸಿಗೆಯಿಂದ ಏಳಲಾರದ ಪರಿಸ್ಥಿತಿ ಬಂದಾಗಲೂ ಜೈಲು ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ಸೇರಿಸುತ್ತಿರಲಿಲ್ಲ ಸರಿಯಾದ ಆಹಾರವೂ ಸಿಗುತ್ತಿರಲಿಲ್ಲ.
ನಾಲ್ಕು ವರ್ಷಗಳ ಅವಧಿಯಲ್ಲಿ ಅಮೀನಾ ಮತ್ತು ಅವರ ಮಕ್ಕಳು ಹಬ್ಬಗಳನ್ನೇ ಆಚರಿಸಲಿಲ್ಲ. ಕಣ್ಣೀರಿನಲ್ಲೇ ದಿನಕಳೆದರು. ಪ್ರತಿವಾರವೂ ಹೆಂಡತಿ ಮಕ್ಕಳೊಡನೆ ಮಾತನಾಡುತ್ತಿದ್ದ ಜೋನ್ ತಾನು ೨೦೧೯ರ ಜೂನ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹೊರಬರುವುದನ್ನೇ ಕಾಯುತಿದ್ದೇನೆ, ಇನ್ನೊಂದೇ ವರ್ಷದಲ್ಲಿ ತಾನು ಭಾರತಕ್ಕೆ ಬಂದು ನಿಮ್ಮನ್ನು ಕೂಡಿಕೊಳ್ಳುತ್ತೇನೆ ಎಂದೆಲ್ಲ ಸಮಾಧಾನಪಡಿಸುತಿದ್ದರು. ತನ್ನ ದುಸ್ಥಿತಿ ನೆನೆದು ದುಖಃ ಉಮ್ಮಳಿಸಿ ಬಂದಾಗಲೂ ಅದನ್ನು ತೋರ್ಪಡಿಸದೇ ಮಕ್ಕಳನ್ನು ಮಾತನಾಡಿಸುತಿದ್ದರು.
ಅಂತೂ 2019ರ ಜನವರಿಯಲ್ಲಿ ಅವರ ಬಿಡುಗಡೆಗೆ ಇನ್ನೇನು ಆರುತಿಂಗಳು ಇರುವಾಗ ಜೋನ್‌ರವರ ಆರೋಗ್ಯ ಒಮ್ಮಿಂದೊಮ್ಮೆಲೇ ಏರುಪೇರಾಗತೊಡಗಿತು. ಕುತ್ತಿಗೆಯ ಬಲಭಾಗದಲ್ಲಿ ಬಾತುಕಾಣಿಸಿಕೊಂಡಿತು. ಮೊದಮೊದಲು ಯಾವುದೇ ನೋವಿರದಿದ್ದರೂ ಕ್ರಮೇಣ ಬಾತು ದೊಡ್ಡದಾಗಿ ಅತೀವ ನೋವು ಉಂಟಾಗುತಿತ್ತು. ದಯವಿಟ್ಟು ತನ್ನನ್ನು ಆಸ್ಪತ್ರೆಗೆ ಸೇರಿಸಿ ಎಂದೂ ಅಂಗಲಾಚಿದಾಗಲೂ ಜೈಲುಸಿಬ್ಬಂದಿಗೆ ಕರುಣೆ ಬರಲಿಲ್ಲ. ಸಹಿಸಲಸಾಧ್ಯವಾದ ನೋವು ಕಾಣಿಸಿಕೊಂಡಾಗ ತನಗೆ ನೋವು ನಿವಾರಕ ಮಾತ್ರೆಗಳನ್ನಾದರೂ ಕೊಡಿ ಎಂದರೆ ಅವುಗಳನ್ನೂ ನೀಡಲಿಲ್ಲ. ಕೊನೆ ಕೊನೆಗೆ ಅವರು ಫೋನ್ ಮಾಡುತಿದ್ದರಾದರೂ ಅವರ ಮಾತುಗಳು ಸರಿಯಾಗಿ ಅರ್ಥವಾಗುತ್ತಲೇ ಇರಲಿಲ್ಲ. ಹೆಂಡತಿ ಅಮೀನಾ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ತನ್ನ ಪತಿಗೆ ಚಿಕಿತ್ಸೆ ನೀಡಲು ಬೇಡಿಕೊಳ್ಳುವುದನ್ನು ಬಿಟ್ಟು ಇನ್ನೆನೂ ಮಾಡುವಂತಿರಲಿಲ್ಲ.
ಜೋನ್‌ರವರ ಬಿಡುಗಡೆಗೆ ಇನ್ನೇನು ಕೇವಲ 3 ತಿಂಗಳು 22 ದಿನಗಳಿರುವಾಗಲೇ ರೋಗ ಉಲ್ಬಣಿಸಿತು 2019ರ ಫೆಬ್ರವರಿ 16ರಂದು ಜೋನ್ ಇಹಲೋಕ ತ್ಯಜಿಸಿದ ಸುದ್ದಿ ಬಂತು.
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು.
ಜೋನ್ ಜೀವಂತವಾಗಿ ಊರಿಗೆ ಬರುವ ಕನಸು ನನಸಾಗಲೇ ಇಲ್ಲ. ತನ್ನ ಗಂಡನಿಗೆ ಸರಿಯಾದ ಚಿಕಿತ್ಸೆಯಂತೂ ಸಿಗಲಿಲ್ಲ ಅದರೆ ಅತನ ಶವಕ್ಕೆ ಯೋಗ್ಯ ಸಂಸ್ಕಾರವಾದರೂ ಸಿಗುವಂತಾಗಲಿ ಎಂದು ಅಮೀನಾ ಭಾರತೀಯ ದೂತಾವಾಸ ಹಾಗೂ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಲು ಪ್ರಾರಂಭಿಸಿದರು. ಈ ಎರಡೂ ಕಚೇರಿಗಳಿಂದ ಫೋನ್ ಮೂಲಕ ಆಶ್ವಾಸನೆಗಳು ಸಿಗುತ್ತಿದ್ದವೇ ವಿನಹ ಶವವನ್ನು ಭಾರತಕ್ಕೆ ತರುವ ಯಾವುದೇ ಕಾರ್ಯಾಚರಣೆ ನಡೆಯಲೇ ಇಲ್ಲ. ಕೊನೆಗೆ ನ್ಯಾಯ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಅಶ್ರಯಿಸಿದರು. ಪ್ರಕರಣದ ಎಲ್ಲಾ ದಾಖಲೆಗಳೆಲ್ಲವನ್ನು ವಿವರವಾಗಿ ಪರಿಶೀಲಿಸಿದ ಪ್ರತಿಷ್ಠಾನ ಹಂತ ಹಂತವಾಗಿ ಅಧಿಕಾರಿಗಳನ್ನು ಹಾಗೂ ವಿದೇಶಾಂಗ ಸಚಿವರನ್ನು ಸಂಪರ್ಕಿಸಿತು.
ಕೊನೆಗೂ ಮರಣ ಹೊಂದಿ ೯ ತಿಂಗಳ ನಂತರ ಜೋನ್ ಶವವಾಗಿ ತನ್ನೂರನ್ನು ಸೇರಿದ್ದಾರೆ. ಇದೀಗ ಅಮೀನಾ ಮತ್ತು ಅವರ ಮಕ್ಕಳು ಉಡುಪಿಯಲ್ಲಿ ನೆಲೆಯೂರಿದ್ದಾರೆ. ಉಡುಪಿಯ ಶೋಕಮಾತಾ ಇಗರ್ಜಿಯ ಗುರುಗಳಾದ ವಂದನಿಯ ವಲೇರಿಯನ್ ಮೆಂಡೋನ್ಸ್ ಹಾಗೂ ಅನೇಕ ಗೃಹಸ್ತರು ಈ ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಬದುಕಿರುವಾಗಲಂತ್ತೂ ನ್ಯಾಯ ಪಡೆಯಲು ಜೋನ್ ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ನಮ್ಮ ಪ್ರತಿಷ್ಠಾನ ಸಂಪೂರ್ಣವಾಗಿ ಬದ್ದವಾಗಿದೆ. ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ದೂತಾವಾಸದವರು ಸಹಕರಿಸಿದಲ್ಲಿ ಸೌದಿ ಅರೇಬಿಯಾದ ರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಲು ಯೋಜಿಸಲಾಗಿದೆ.
ಅಮೀನಾ ಮತ್ತು ಅವರ ಇಬ್ಬರು ಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ಉಡುಪಿಯ ಹಿರಿಯ ವಕೀಲರಾದ ಶಾಂತರಾಮ ಶೆಟ್ಟಿ ಸಹಕಾರ ನೀಡಲಿದ್ದಾರೆ.
ಜೋನ್ ಮೊಂತೇರೊ ರವರ ಮರಣ: ಸಹಜವೋ ? ಅಸಹಜವೋ ?
ಈ ಹಿಂದೆ ಗಲ್ಫ ದೇಶಗಳಲ್ಲಿ ಮರಣಹೊಂದಿದ ಭಾರತೀಯ ನಾಗರಿಕರ ಅನೇಕ ಪ್ರಕರಣಗಳಲ್ಲಿ ಅವರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ದುಖಃ ತಪ್ತ ಕುಟುಂಬಗಳಿಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಹಕಾರ ಹಾಗೂ ಮಾರ್ಗದರ್ಶನ ಮಾಡಿದ್ದಿದೆ. ಪಾರ್ಥಿವ ಶರೀರದೊಂದಿಗೆ ಮರಣ ಹೊಂದಿದ ವ್ಯಕ್ತಿಗೆ ಸಂಬಂಧಿಸಿದ ಪಾಸ್‌ಪೋರ್ಟ್, ಇನ್ಶೂರೆನ್ಸ್ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರ, ಉದ್ಯೋಗ ಸಂಬಂಧಿತ ಮಾಹಿತಿ ಇತ್ಯಾದಿ ಅನೇಕ ದಾಖಲೆಗಳನ್ನು ಕಳುಹಿಸುವುದು ಭಾರತದ ರಾಯಭಾರಿ ಕಛೇರಿಯ ಕರ್ತವ್ಯ. ಒಂದು ವೇಳೆ ಅಸಹಜ ಮರಣ ಸಂಭವಿಸಿದಲ್ಲಿ ಪೋಸ್ಟ್ ಮಾರ್ಟಮ್ ವರದಿ ಕಳುಹಿಸುವುದು ಅವಶ್ಯ. ಆದರೆ ಈ ಪ್ರಕರಣದಲ್ಲಿ ಈ ಮೇಲೆ ಸೂಚಿಸಿದ ಯಾವುದೇ ದಾಖಲೆಗಳನ್ನು ಕಳುಹಿಸಿಲ್ಲ.
ಈ ಪ್ರಕರಣದಲ್ಲಿ ಅಲವಾರು ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ.
1. ಮೊದಲನೇಯದಾಗಿ ಜೋನ್ ಮೊಂತೇರೊ ರವರು ಜೈಲಿನಲ್ಲಿ ಮರಣಹೊಂದಿರುವುದರಿಂದ ಪೋಸ್ಟ್ ಮಾರ್ಟಮ್ ಮಾಡುವುದು ಅವಶ್ಯ. ಅವರ ಶವದ ಮೇಲಿರುವ ಗಾಯಗಳ ಗಮನಿಸಿದಾ ಪೋಸ್ಟ್ ಮಾರ್ಟಮ್ ಆಗಿರಬೇಕು ಎನಿಸುತ್ತಿದೆ ಆದರೆ ಪೋಸ್ಟ್ ಮಾರ್ಟಮ್ ವರದಿ ಇಲ್ಲ.
2. ದೇಹದ ಮಧ್ಯಭಾಗಮಾಡಿದ ಗುರುತುಗಳು ಇರುವುದರಿಂದ ಪೋಸ್ಟ್ ಮಾರ್ಟಮ್ ಮಾಡಿರಬೇಕು ಎಂದು ಭಾವಿಸಬೇಕಾಗಿದೆ. ಇಲ್ಲಿ ಪೋಸ್ಟ್ ಮಾರ್ಟಮ್ ವರದಿ ಲಗ್ತೀಕರಿಸಿಲ್ಲ. ಅದರ ಬದಲಾಗಿ 20-11-2019 ಎಂದು ದೃಡಪತ್ರ ದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಅನ್ನನಾಳ, ಮೂತ್ರಪಿಂಡ, ಯಕೃತ್, ಜಠರ ಮುಂತಾದವುಗಳನ್ನು ಈಗಾಗಲೇ ತೆಗೆದಿರುವುದರಿಂದ ಪೋಸ್ಟ್ ಮಾರ್ಟಮ್ ಮಾಡಿರಲೇಬೇಕು.
3 ಮರಣ ಸಂಭವಿಸಿದ್ದು ಹೇಗೆ ಎಂದು ಮರಣ ದೃಡ ಪತ್ರಿಕೆಯಲ್ಲಿ ಸೂಚಿಸಲೇ ಬೇಕಾಗಿದೆ. ಶವದೊಂದಿಗೆ ಕಳುಹಿಸಿದ ದೃಡ ಪತ್ರಿಕೆಯಲ್ಲಿ ಹೃತ್ಕಿಯೆ ಹಾಗೂ ಶ್ವಾಸ ನಿಂತಿರುವುದು “ಮರಣಕ್ಕೆ ಕಾರಣ” ಎಂದು ಬರೆದಿರುವುದು ವಿಚಿತ್ರ. ಯಾವುದೇ ದೇಶದಲ್ಲಿ ಈ ರೀತಿಯಲ್ಲಿ “ಮರಣಕ್ಕೆ ಕಾರಣ” ಬರೆಯುವುದಿಲ್ಲ.
4 ಜೋನ್ ಮೊಂತೇರೊ ಅವರ ಮೂಲ ಪಾಸ್ ಪೋರ್ಟ್ ಕಳುಹಿಸಿಲ್ಲ. ಬದಲಾಗಿ ಮೃತ ಶರೀರವನ್ನು ಸಾಗಿಸಲು ಎಮರ್‌ಜೇನ್ಸಿ ಪಾಸ್‌ಪೋರ್ಟ್ ಮೂಲಕ ಕಳುಹಿಸಲಾಗಿದೆ. ಮೂಲ ಪಾಸ್‌ಪೋರ್ಟ್ ಜೈಲ್ ಅಧಿಕಾರಿಗಳ ವಶ ಇರಲೇಬೇಕು. ಏಕೆ ಕಳುಹಿಸಲಾಗಿಲ್ಲ ?
5. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಪ್ರತಿಯೋರ್ವರಿಗೂ ಪ್ರತೇಕ ಕಾರ್ಮಿಕ ಇಲಾಖೆಯ ರಿಜಿಸ್ರ್ಟೇಶನ್ ನಂಬ್ರ ಹಾಗೂ ವಿಮೆ ಇರಲೇ ಬೇಕಾಗಿದೆ. ಈ ದಾಖಲೆಗಳೆರಡೂ ಲಭ್ಯವಿಲ್ಲ.
6. ಶವದೊಂದಿಗೆ ಬಂದ ದಾಖಲೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ದಾಖಲೆಗಳು ಇಲ್ಲ. ರೋಗಿಯ ಪರಿಸ್ಥಿತಿ ಈ ಹಂತಕ್ಕೆ ತಲುಪಲು ಕಾರಣವೇನು ?. ಜೋನ್ ಮೊಂತೇರೊ ಅವರು ತನ್ನ ಮಗಳಿಗೆ ಫೋನ್ ಮಾಡಿದಾಗ ತನಗೆ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿಲ್ಲ ಮತ್ತು ಸರಿಯಾದ ಚಿಕಿತ್ಸೆಯೇ ಕೊಡುತ್ತಿಲ್ಲ ಎಂದು ಹೇಳಿರುವುದರ ದ್ವನಿ ಮುದ್ರಿಕೆ ನಮ್ಮ ಬಳಿಯಲ್ಲಿದೆ.
7 ತನಗೆ ಯಾವ್ಯಾವ ರೀತಿಯಲ್ಲಿ ಹಿಂಸೆ ನೀಡಲಾಗಿದೆ ಎಂದು ಸ್ವತಃ ಜೋನ್ ಮೊಂತೇರೊ ಅವರು ಕಾರಾಗೃಹದಲ್ಲಿರುವಾಗ ಹೇಳಿರುವುದನ್ನು ಸಂಪೂರ್ಣವಾಗಿ ದ್ವನಿ ಮುದ್ರಿಸಲಾಗಿದೆ.
ಈ ಮೇಲೆ ಸೂಚಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಭಾರತೀಯ ದೂತವಾಸಕ್ಕೆ ಆದೇಶ ನೀಡಲು ವಿದೇಶಾಂಗ ಸಚಿವರನ್ನು ಆಗ್ರಹಿಸಲಾಗುವುದು.
It is high time people should realize , have to work and earn their bread in country where they born & brought up. “Doorada betta nunnage”.