ಜೂ.6 ರಂದು ಮುಂಗಾರು ಮಳೆ ಪ್ರವೇಶ : ಕೊಡಗು ಜಿಲ್ಲಾಡಳಿತ ಸನ್ನದ್ಧ
ಮಡಿಕೇರಿ :ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮುಂಗಾರು ಮಳೆಯು ಈ ಬಾರಿ ಐದು ದಿನ ತಡವಾಗಿ ಜೂನ್ 6ರಂದು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಧ್ಯಂತರ ವರದಿಯಲ್ಲಿ ಗುರುತಿಸಲಾಗಿರುವ 13 ಬಾಧಿತ ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ. ಸದರಿ ನೋಡೆಲ್ ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ, ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಪ್ರಕೃತಿ ವಿಕೋಪ ಎದುರಾದಲ್ಲಿ ಸಮರ್ಥವಾಗಿ ಎದುರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುತ್ತಾರೆ.
ನೋಡೆಲ್ ಅಧಿಕಾರಿಗಳು, ಪಿ ಡಿ ಓ, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ.
ಕಳೆದ ಬಾರಿಯ ಭೂಕುಸಿತ ಹಾಗೂ ಪ್ರವಾಹದಿಂದ ನದಿ ತೋಡುಗಳಲ್ಲಿ ಸಂಗ್ರಹವಾಗಿದ್ದ ಹೂಳು, ಮರಗಳು ಹಾಗೂ ಬಂಡೆಗಳನ್ನು ತೆರವುಗೊಳಿಸಿ ನೀರಿನ ಹರಿವನ್ನು ಸರಾಗಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಬದಿಯಲ್ಲಿನ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ , ಅರಣ್ಯ ಇಲಾಖೆಯಿಂದ ಈಗಾಗಲೇ ತುರ್ತು ಸಂದರ್ಭಗಳಲ್ಲಿನ ರಕ್ಷಣಾ ಕಾರ್ಯದ ಅಣುಕು ಪ್ರದರ್ಶನ ಮಾಡಲಾಗಿದ್ದು, ಈ ತಿಂಗಳ 28 ಹಾಗೂ 29ರಂದು ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸಿವಿಲ್ ಡಿಫೆನ್ಸ್ ಫೋರ್ಸ್ ಡೋಗ್ರಾ ರೇಜಿಮೆಂಟ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಇತರ ಇಲಾಖೆಗಳು ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದ ಸನ್ನಿವೇಶದಲ್ಲಿನ ಜಂಟಿ ರಕ್ಷಣಾ ಕಾರ್ಯದ ಅಣುಕು ಪ್ರದರ್ಶನ ಕೈಗೊಳ್ಳಲಿದ್ದಾರೆ.
ಇಲ್ಲಿಗೆ ಕರೆ ಮಾಡಿ :
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜಿಲ್ಲೆಯ ಹವಾಮಾನದ ಬಗ್ಗೆ ನಿರಂತರ ನಿಗಾವಹಿಸಿದ್ದು, ಈವರೆಗೆ ಪ್ರಕೃತಿ ವಿಕೋಪ ಸಂಭವಿಸುವ ಯಾವುದೇ ಮುನ್ಸೂಚನೆ ಇರುವುದಿಲ್ಲ. ಹವಾಮಾನದ ಮಾಹಿತಿಯನ್ನು ಕ.ರಾ.ನೈ.ವಿ.ಉ.ಕೇಂದ್ರ (ಕೆ.ಎಸ್.ಎನ್.ಡಿ.ಎಮ್.ಸಿ) ದೂರವಾಣಿ ಸಂಖ್ಯೆ 9243345433, 080-22745232/22745234 ಗಳಿಗೆ ಕರೆ ಮಾಡಿ ಪಡೆಯಬಹುದು. ಸೂಕ್ಷ್ಮ ಪ್ರದೇಶದಲ್ಲಿನ ಜನರು ತಮ್ಮ ಪ್ರದೇಶದ ಪಿಡಿಒ/ನೋಡೆಲ್ ಅಧಿಕಾರಿ/ಕಂದಾಯ ಪರಿವೀಕ್ಷಕರು/ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಕೊಠಡಿಯ ಟೋಲ್ ಫ್ರೀ ಸಂಖ್ಯೆ 1077 (082722221077) ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಸುಳ್ಳು ಸುದ್ದಿ /ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದಾಗಿ ಈ ಮೂಲಕ ತಿಳಿಸಿದೆ. ಮಳೆಗಾಲವನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತವು ಎಲ್ಲಾ ರೀತಿಯಲ್ಲಿ ಸನ್ನದ್ದವಾಗಿದ್ದು ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.