ಪ್ರಮೋದ್ ವಿರುದ್ಧ ಮೊಯ್ಲಿ ಹೇಳಿಕೆ : ಹರ್ಷ ವಿರುದ್ಧ ಸಿಡಿದೆದ್ದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ
ಉಡುಪಿ – ಪ್ರಮೋದ್ ಮಧ್ವರಾಜ್ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದು, ಅವರು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಅವರು ಜೆಡಿಎಸ್ ನಾಯಕ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ಮುಂದುವರಿದಿದ್ದು, ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಅವರಿಗೆ ಉಡುಪಿ ಬಾಕ್ ಬ್ಲಾಕ್ ಕಾಂಗ್ರೆಸ್ ನಾಯಕ ಸದಾಶಿವ ಅಮೀನ್ ಕಟ್ಟೆಗುಡ್ಡೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಭೇಟಿ ಕೊಟ್ಟ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಪತ್ರಿಕಾಗೋಷ್ಠಿಯಲ್ಲಿ, ಪ್ರಮೋದ್ ಮಧ್ವರಾಜ್ ಅವರ ಸ್ವಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಾಯಕರಲ್ಲ ಅವರು ಜೆಡಿಎಸ್ ನಾಯಕರೆಂದು ಹೇಳಿದ್ದು, ಮಧ್ವರಾಜ್ ಕಾಂಗ್ರೆಸ್ಗೆ ಸೇರ್ಪಡೆಯಾಗಬೇಕಾದರೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ವೀರಪ್ಪ ಮೊಯ್ಲಿ ಅವರ ಹೇಳಿಕೆಯಿಂದ ತೀವ್ರ ಆಕ್ರೋಶಗೊಂಡಿರುವ ಪ್ರಮೋದ್ ಮಧ್ವರಾಜ್ ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತರು ಸೋಷಲ್ ಮಾಧ್ಯಮದಲ್ಲಿ ವೀರಪ್ಪ ಮೊಯ್ಲಿ ಮತ್ತು ಪುತ್ರ ಹರ್ಷ ಮೊಯ್ಲಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರಿಗೆ ಫೋನ್ ಮೂಲಕ ಸಂಭಾಷಣೆ ಮಾಡಿದ ಆಡಿಯೊ ವೈರಲ್ ಆಗುತ್ತಿದೆ.
“ನಾನು ಸದಾಶಿವ ಅಮೀನ್ ಕಟ್ಟೆಗುಡ್ಡೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ” ಎಂದು ಪರಿಚಯ ಮಾಡುತ್ತಿರುವ ಈ ಆಡಿಯೋದಲ್ಲಿ, ನಿಮ್ಮ ತಂದೆ ವೀರಪ್ಪ ಮೊಯ್ಲಿ, ಇಂದು ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನಾಯಕರಲ್ಲ ಅವರು ಜೆಡಿಎಸ್ ನಾಯಕ ಎಂದು ಹೇಳುತ್ತಾರೆ ಮಾತ್ರವಲ್ಲದೆ, ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನೀವು ವೇದಿಕೆಯಲ್ಲಿ ಕುಳಿತುಕೊಂಡಿದ್ದಿರಿ. ಜೆಡಿಎಸ್ ಅಥವಾ ಬಿಜೆಪಿ ಪಕ್ಷದಲ್ಲಿರುವ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಪರಿಚಯ ಮಾಡುವ ಬದಲು, ನಿಮ್ಮ ತಂದೆಯವರು ಪ್ರಮೋದ್ ಮಧ್ವರಾಜ್ ಅವರನ್ನು ದೂರುತ್ತಿರುವುದು ಎಷ್ಟು ಸರಿ ಎಂದು ಹರ್ಷ ಮೊಯ್ಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹರ್ಷ ಮೊಯ್ಲಿ ಉತ್ತರಿಸುತ್ತಾ, ಪ್ರಮೋದ್ ಮಧ್ವರಾಜ್ ಅವರನ್ನು ಏಕವಚನದಲ್ಲಿ ಮಾತನಾಡುತ್ತಾ ಅವರು ಜೆಡಿಎಸ್ಸಿಗೆ ಹೋಗಿದ್ದಾರೆ. ಅವರೇನು ಕಾಂಗ್ರೆಸ್ ನಾಯಕರ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಸ್ವಲ್ಪ ವಾಗ್ಯುದ್ಧ ನಡೆದ ಬಳಿಕ ಹರ್ಷ ಮೊಯ್ಲಿ ಸದಾಶಿವ ಅಮೀನ್ ಅವರ ಫೋನ್ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರೇ ಕಾಂಗ್ರೆಸ್ ಅಭ್ಯರ್ಥಿ ಆಗಬೇಕೆಂದು ಕಾರ್ಯಕರ್ತರು ಹೋರಾಟ ಮಾಡುತ್ತಿರುವಾಗ, ವೀರಪ್ಪ ಮೊಯ್ಲಿ ತನ್ನ ಪುತ್ರ ಹರ್ಷ ಮೊಯ್ಲಿ ಅವರನ್ನು ಅಭ್ಯರ್ಥಿಯಾಗಲು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ಹರ್ಷ ಮೊಯ್ಲಿ ಅಭ್ಯರ್ಥಿಯಾದರೆ ತಾವು ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದಾಗ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರಿಗೆ ಅಭ್ಯರ್ಥಿ ಸ್ಥಾನ ತಪ್ಪಿಸಿ, ಮಾಜಿ ಶಾಸಕ ದಿವಂಗತ ಗೋಪಾಲ ಭಂಡಾರಿಯವರಿಗೆ ಅಭ್ಯರ್ಥಿ ಸ್ಥಾನ ನೀಡಿದ್ದರು