ಮಾಧ್ಯಮಗಳ ಬದ್ದತೆ ಬದಲಾಗಬಾರದು – ಡಾ.ಪಿ.ಎಲ್.ಧರ್ಮ

 ಉಡುಪಿ – ಮಾಧ್ಯಮ ಬದಲಾಗುತ್ತಿದೆ, ಮಾಧ್ಯಮದಲ್ಲಿರುವ ಆಲೋಚನೆಗಳು ಕೂಡ ಬದಲಾಗುತ್ತಿದೆ, ಆದರೇ ಮಾಧ್ಯಮಕ್ಕಿರುವ ಸಾಮಾಜಿಕ ಬದ್ಧತೆ ಬದಲಾಗಬಾರದು ಎಂದು ಮಂಗಳೂರು ವಿ.ವಿ.ಯ ರಾಜಕೀಯ ಶಾಸ್ತ್ರ ಉಪನ್ಯಾಸಕ ಡಾ. ಪಿ.ಎಸ್.ಧರ್ಮ ಹೇಳಿದ್ದಾರೆ.  ಅವರು ಇಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.  ಬಡತನದಲ್ಲಿರುವ, ಶೋಷಿತರ, ಉದ್ಯೋಗಾವಕಾಶ ವಂಚಿತರ ಬಗ್ಗೆ ಮಠಾಧಿಪತಿಗಳಾಗಲಿ, ಶ್ರೀಮಂತರಾಗಲಿ, ರಾಜಕಾರಣಿಗಳಾಗಲಿ ಪ್ರಶ್ನೆ ಎತ್ತುವುದಿಲ್ಲ, ಆದರೇ ಈ ಬಗ್ಗೆ ಮಾಧ್ಯಮಗಳು ಸತತವಾಗಿ ಪ್ರಶ್ನೆ ಎತ್ತುತ್ತಿವೆ ಎಂದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಗುರುತಿಸಿ, ಅವರನ್ನೂ ಕೂಡ ತಮ್ಮ ವಸ್ತು ವಿಷಯವನ್ನಾಗಿಸುವ ಮಾಧ್ಯಮಗಳ ಸಾಮಾಜಿಕ ಬದ್ಧತೆ ಬಹಳ ದೊಡ್ಡದು ಎಂದವರು ಶ್ಲಾಘಿಸಿದರು.

  ಪತ್ರಕರ್ತರು ಕೆಲವೇ ಆಯ್ದ ವಿಷಯಗಳಿಗಷ್ಟೇ ಸೀಮಿತರಾಗಬಾರದು, ಪತ್ರಕರ್ತರು ಸದಾ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಬೇಕು, ಸಂಗೀತದ ಜೊತೆಗೆ ರೋದನೆಯನ್ನು, ಸಾಧನೆಯ ಜೊತೆಗೆ ಪ್ರತಿಭಟನೆಯನ್ನೂ ವರದಿಯ ವಿಷಯವನ್ನಾಗಿಸಿಕೊಳ್ಳಬೇಕು,  ಸಮುದಾಯ, ಶಿಕ್ಷಣ, ಬಡತನ ಇವು ಪತ್ರಿಕೋದ್ಯಮದ ಆದ್ಯತೆಯ ವಿಷಯಗಳಾಬೇಕು ಎಂದವರು ಸಲಹೆ ಮಾಡಿದರು.ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಿಗಳಾಗಿ   ವಿದ್ಯಾರ್ಥಿಗಳು ಖಾಸಗಿ ಉದ್ಯೋಗಿಗಳಾಗುವುದಕ್ಕಿಂತ ಸರ್ಕಾರಿ ಉದ್ಯೋಗಿಗಳಾಗುವತ್ತ ಗಮನ ಹರಿಸಿ, ಅದರಲ್ಲೂ ಕಂದಾಯದಂತಹ ಇಲಾಖೆಯಲ್ಲಿ ಪ್ರಾಮಾಣಿಕ ಉದ್ಯೋಗಿಗಳ ಅವಶ್ಯಕತೆ ಇದೆ. ತಹಶೀಲ್ದಾರ್, ಐಎಎಸ್ ಅಧಿಕಾರಿಗಳಾಗಬೇಕು, ಅತಿಕ್ರಮಣಕ್ಕೊಳಗಾದ ಭೂಮಿಯನ್ನು ಸೂರಿಲ್ಲದ ಬಡವರಿಗೆ ವಿತರಿಸಬೇಕು ಎಂದು ಡಾ.ಪಿ.ಎಲ್.ಧರ್ಮ ಅವರು ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 


  ಇದೇ ಸಂದರ್ಭದಲ್ಲಿ ಮೈಸೂರಿನ ಹಿರಿಯ ಸುದ್ದಿಛಾಯಾಗ್ರಾಹಕ ಜಿ.ಕೆ.ಹೆಗಡೆ ಅವರಿಂದ ತಮ್ಮ ಛಾಯಾಚಿತ್ರಗಳ ಪ್ರದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.  ನಂತರ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ ಪೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕಾರ್ಕಳದ ಹಿರಿಯ ಪತ್ರಿಕಾ ವಿತರಕ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.  ಮುಖ್ಯ ಅತಿಥಿಯಾಗಿ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಶುಭ ಹಾರೈಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್  ವೇದಿಕೆಯಲ್ಲಿದ್ದರು. ಜೊತೆ ಕಾರ್ಯದರ್ಶಿ ಮೈಕಲ್ ರಾಡ್ರಿಗಸ್ ಸ್ವಾಗತಿಸಿ, ಪತ್ರಕರ್ತ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.
  –  

Leave a Reply

Your email address will not be published. Required fields are marked *

error: Content is protected !!