ಹುತಾತ್ಮ ಹೆಮ್ಮನೆ ಪುಟ್ಟಬಸಪ್ಪ ಸಂಸ್ಮರಣೆ
ಮಡಿಕೇರಿ : ಬ್ರಿಟಿಷರ ವಿರುದ್ಧ ಹೋರಾಡಿ ಬಲಿದಾನಗೈದ ಕೊಡಗಿನ ವೀರರನ್ನು ಸದಾ ಸ್ಮರಿಸುವ ಮತ್ತು ಪರಿಚಯಿಸುವ ಮೂಲಕ ಹೋರಾಟಗಾರರ ದೇಶಭಕ್ತಿಯ ಬಗ್ಗೆ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬಬೇಕು ಎಂದು ವಿಚಾರವಾದಿ ವಿ.ಪಿ.ಶಶಿಧರ್ ಕರೆ ನೀಡಿದ್ದಾರೆ.
1837ರ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಪುಟ್ಟಬಸಪ್ಪ ಅವರ ಬಲಿದಾನದ ದಿನವನ್ನು ನೆನಪಿಸುವ ಕಾರ್ಯಕ್ರಮ ಹೆಮ್ಮನೆ ಪುಟ್ಟಬಸಪ್ಪ ಸಂಸ್ಮರಣಾ ಸಮಿತಿ ವತಿಯಿಂದ ನಗರದ ಪತ್ರಿಕಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಶಿಧರ್, ಕೊಡಗಿನ ಅನೇಕ ಮಂದಿ ವೀರರು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದಾರೆ. ತೆರೆಮರೆಗೆ ಸರಿದು ಹೋಗಿರುವ ಹೋರಾಟಗಾರರನ್ನು ಇಂದಿನ ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.
ಜಾತಿ ಆಧಾರದ ಮೇಲೆ ಕೆಲವು ಹೋರಾಟಗಾರರನ್ನು ವೈಭವೀಕರಿಸುವ ಮೂಲಕ ನೈಜ ಹೋರಾಟಗಾರರನ್ನು ಕಡೆಗಣಿಸುವ ಕಾರ್ಯವಾಗುತ್ತಿದೆ. ಈ ಬೆಳವಣಿಗೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರು ಕೊಡಗಿನ ಇತಿಹಾಸವನ್ನು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ವಿರಾಜಪೇಟೆ ಪ್ರಗತಿಪರ ಚಿಂತಕ ಡಾ. ಐ.ಆರ್.ದುರ್ಗಾಪ್ರಸಾದ್, ವಕೀಲ ಬಿ.ಎಸ್.ರುದ್ರಪ್ರಸನ್ನ, ಪತ್ರಿಕಾಭವನ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಬಿ.ಎನ್.ಮನುಶೆಣೈ ಹಾಗೂ ಹೆಮ್ಮನೆ ಪುಟ್ಟಬಸಪ್ಪ ಸಂಸ್ಮರಣಾ ಸಮಿತಿಯ ಪ್ರಮುಖರು ಹಾಜರಿದ್ದರು.