ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಂಜುನಾಥ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮ
ಉದ್ಯಾವರ: ಮೂವತ್ತೆರಡು ವರ್ಷಗಳ ಕಾಲ ರಾಷ್ಟ್ರ ನಾಯಕರಾದ ಶ್ರೀ ಓಸ್ಕರ್ ಫೆರ್ನಾಂಡಿಸ್ರವರ ಆಪ್ತ ಸಹಾಯಕರಾಗಿದ್ದುಕೊಂಡು ಅವರ ಎಲ್ಲಾ ಕೆಲಸ ಕಾರ್ಯಗಳಿಗೆ ನೆರವಾಗಿ ನೈತಿಕ ಬಲ ತುಂಬಿದವರು ಶ್ರೀ ಮಂಜುನಾಥ ಉದ್ಯಾವರ್ರವರು.
ಓಸ್ಕರ್ ಫೆರ್ನಾಂಡಿಸ್ರಂತೆ ಎಲ್ಲರೊಂದಿಗೆ ಸಮಾನಾಗಿ ಬೆರೆತು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಬಾಳಿದ ಮಂಜು ಸತ್ತ ನಂತರವೂ ಬದುಕಿದವರು. ರಾಜಕೀಯದ ವ್ಯಕ್ತಿಗಳ ಬಗ್ಗೆ ರೇಜಿಗೆಯಾಗುತ್ತಿದ್ದ ನನ್ನಂತವರಿಗೆ ಮಂಜು ಮರುಭೂಮಿಯಲ್ಲಿ ಒಂದು ಓಯಸ್ಸಿಸ್ ಆಗಿದ್ದರು ಎಂದು ಉಡುಪಿ ಧರ್ಮಗುರುಗಳೂ ಮಂಜುನಾಥ ಉದ್ಯಾವರ್ರವರ ನಿಕಟವರ್ತಿ ರೆ.ಫಾ. ವಿಲಿಯಂ ಮಾರ್ಟಿಸ್ರವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ ಏಳನೇ ವರ್ಷದ ಮಂಜುನಾಥ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯಿಂದ ಮಾತನಾಡಿದರು.
ಅವರು ಮುಂದುವರಿಯುತ್ತಾ ಮಂಜುನಾಥ ಉದ್ಯಾವರ್ರವರ ಸಾಮಾಜಿಕ ಬದ್ದತೆ ಅವರ ಕುಟುಂಬದ ಬಳುವಳಿ ಹಾಗಾಗಿ ಅದರಲ್ಲಿ ಗಟ್ಟಿತನವಿತ್ತು ಕೃತಕತೆ ಇರಲಿಲ್ಲ. ಸಾಮಾಜಿಕ ಜೀವನದಲ್ಲಿ ಪ್ರಾಮಾಣಿಕತೆಯಿಂದ ಬಾಳಿ ಬದುಕಿದ ಮಂಜುನನ್ನು ಸಾವಿನ ನಂತರವೂ ಕೂಡ ಈ ರೀತಿ ನೆನಪಿಸಿಕೊಳ್ಳುತ್ತೇವೆ ಎಂದರೆ ಅವರ ಬದುಕಿನ ಪರಿ ಅರ್ಥವಾಗುತ್ತದೆ. ಓಸ್ಕರಣ್ಣನ ಆಪ್ತ ಸಹಾಯಕರಾಗಿದ್ದ ಅವರು ಎಲ್ಲಾ ರೀತಿಯಲ್ಲಿ ಗುರುವಿಗೆ ತಕ್ಕ ಶಿಷ್ಯರಾಗಿದ್ದರು ಎಂದರು.
ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ರಾಜು ಪೂಜಾರಿಯವರು ಮಾತನಾಡಿ ಮಂಜಣ್ಣ ಸಮಾಜ ಕಟ್ಟುವ ಕೆಲಸ ಮಾಡಿದವರು. ಅವರ ಸ್ವಾರ್ಥ ರಹಿತ ಬದುಕು ಇಂದಿನ ಯುವಕರಿಗೊಂದು ಮಾದರಿ. ರಾಜಕೀಯ ವ್ಯಕ್ತಿಗಳನ್ನು ಗುಮಾನಿಯಲ್ಲಿ ನೋಡುವ ಈ ಕಾಲಘಟ್ಟದಲ್ಲಿ ಮಂಜುನಾಥ ಉದ್ಯಾವರ್ರವರಂತ ವ್ಯಕ್ತಿತ್ವ ನಮಗೆ ಬೇಕಾಗಿದೆ. ಅವರ ಇಡೀ ರಾಜಕೀಯ ಬದುಕಿನಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಯೋಗ್ಯ ಸ್ಥಾನಮಾನ ಸಿಗುವಂತೆ ಪ್ರಯತ್ನಿಸಿದವರು. ತನ್ನ ಮುಂದೆ ಸಮಸ್ಯೆ ತೋಡಿಕೊಳ್ಳಲು ಬರುವವರು ಯಾರೇ ಆಗಿದ್ದರೂ ಅವರ ಪ್ರತಿಕ್ರಿಯೆ ಸಮಾನಾಗಿರುತ್ತಿತ್ತು ಮತ್ತು ಅದಕ್ಕೆ ಕಿವಿಯಾಗಿ ಸಮಸ್ಯೆ ನಿವಾರಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದ್ದರು. ನನ್ನ ಸಾಮಾಜಿಕ ಜೀವನ ರೂಪಿಸಿದವರಲ್ಲಿ ಮಂಜುನಾಥ ಉದ್ಯಾವರ್ರವರು ಓರ್ವರು ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಇಂತಹ ಮೇರು ವ್ಯಕ್ತಿತ್ವವನ್ನು ನೆನಪಿಸುವ ಮತ್ತು ಮುಂದಿನ ಜನಾಂಗಕ್ಕೆ ಪರಿಚಯಿಸುವ ಈ ಕಾರ್ಯಕ್ರಮ ಶ್ಲಾಘನೀಯವಾದುದು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಕುಂದಾಪುರದ ಖ್ಯಾತ ನ್ಯಾಯವಾದಿ ಶ್ಯಾಮಲಾ ಭಂಡಾರಿಯವರು ಮಾತನಾಡಿ ಉದ್ಯಾವರ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿಸಬೇಕು ಎಂಬ ಉತ್ಕಟವಾದ ಹಂಬಲ ಮಂಜು ಅವರಿಗೆ ಇತ್ತು. ಅದರಂತೆ ಅವರು ನಡೆದುಕೊಂಡರೂ ಕೂಡಾ. ಅವರ ಸಾಮಾಜಿಕ ಬದ್ದತೆ ಸ್ವಾರ್ಥ ರಹಿತ ಬದುಕು, ಪ್ರಾಮಾಣಿಕತೆ, ಸೇವಾ ಮನೋಭಾವ, ನಿಷ್ಟುರತೆ ಮೊದಲಾದ ಗುಣಗಳು ಅವರನ್ನು ಸತ್ತ ನಂತರವೂ ಕೂಡಾ ಬದುಕಿಸುತ್ತಿದೆ. ತನ್ನ ವೈಯಕ್ತಿಕ ಬದುಕನ್ನು ಆರ್ಥಿಕವಾಗಿ ಗಟ್ಟಿಮಾಡಿಕೊಳ್ಳಬಹುದಾದ ಅವಕಾಶ ಇದ್ದರೂ ಆ ಕಡೆಗೆ ಗಮನಿಸದೆ ನೋವುಂಡವರಿಗೆ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದ ಮಂಜಣ್ಣ ಸಮಾಜಕ್ಕೆ ಮಾದರಿಯಾಗಿ ಬದುಕಿದವರು. ಓಸ್ಕರ್ ಫೆರ್ನಾಂಡಿಸ್ರವರ ಆಪ್ತ ಸಹಾಯಕರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡ ಮಂಜುನಾಥ ಉದ್ಯಾವರ್ರವರು ಪಕ್ಷದ ಬಗ್ಗೆ ಅಚಲ ಬದ್ದತೆ ಇದ್ದವರು.
ಇಂದು ನಮ್ಮ ಮುಂದೆ ಯೋಗ್ಯ ಮಾರ್ಗದರ್ಶಕರಿಲ್ಲ. ಅಂದು ಮಂಜುನಾಥ ಉದ್ಯಾವರ್ರವರು ಯೋಗ್ಯ ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗದರ್ಶನ ಭಾಗ್ಯ ನನಗೂ ಲಭಿಸಿದೆ. ಜನ ಸಾಮಾನ್ಯರಿಗಾಗಿಯೇ ಬದುಕಿದ ಮಂಜುನಾಥ ಉದ್ಯಾವರ್ರವರ ನೆನಪು ಸ್ಥಿರ ಸ್ಥಾಯಿ ಆಗಲು ಅವರ ಹೆಸರಿನಲ್ಲಿ ಸಭಾಭವನವನ್ನು ನಿರ್ಮಿಸಿ ಅದನ್ನು ಬಡ ಜನತೆಗೆ ಮಿತದರದಲ್ಲಿ ಬಳಕೆ ಮಾಡಲು ಕೊಡಬೇಕು. ಈ ಮೂಲಕ ಮಂಜಣ್ಣನ ನೆನಪು ಸ್ಥಿರ ಸ್ಥಾಯಿ ಆಗಲಿ. ಈ ಬಗ್ಗೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಯೋಜನೆಯನ್ನು ಹಾಕಿಕೊಳ್ಳಲಿ ಎಂದರು.
ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಿಲಕ್ರಾಜ್ ಸಾಲ್ಯಾನ್ರವರು ಸ್ವಾಗತಿಸಿದರು, ನಿರ್ದೇಶಕ ಶ್ರೀ ಉದ್ಯಾವರ ನಾಗೇಶ್ ಕುಮಾರ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು. ಮಾಜಿ ಅಧ್ಯಕ್ಷ ಶ್ರೀ ಅನೂಪ್ ಕುಮಾರ್ರವರು ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿರುವ ರಾಧ( ನಿರ್ದೇಶನ ಶ್ರೀಪಾದ್ ಭಟ್, ರಚನೆ: ಸುಧಾ ಆಡುಕಳ) ಏಕವ್ಯಕ್ತಿ ರಂಗ ಪ್ರದರ್ಶನ ಜರಗಿತು.