ಫಾ.ಮಹೇಶ್ ಡಿಸೋಜಾ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಳೆ ಅವಕಾಶ
ಶಿರ್ವ : ಸಾವೊದ್ ಮಾತೆಯ ದೇವಾಲಯ ಶಿರ್ವ ಇಲ್ಲಿಯ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೋ ಶಾಲೆಯ ಪ್ರಿನ್ಸಿಪಾಲ್ ಫಾ. ಮಹೇಶ್ ಡಿಸೋಜಾ ಅಂತ್ಯ ಕ್ರಿಯೆಯು ನಾಳೆ ಅಕ್ಟೋಬರ್ 15 ರಂದು ಮಂಗಳವಾರ ಶಿರ್ವ ದೇವಾಲಯದಲ್ಲಿ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರಿಗೆ ಪಾರ್ಥಿವ ಶರೀರ ವೀಕ್ಷಣೆಗೆ ಅವಕಾಶವಿದೆ ಎಂದು ಉಡುಪಿ ಧರ್ಮಪ್ರಾಂತ್ಯ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ದೇವಾಲಯದ ಸಹಾಯಕ ಧರ್ಮಗುರು ಫಾ. ಅಶ್ವಿನ್, ಫಾ. ಮಹೇಶ್ ಅವರನ್ನು ಊಟಕ್ಕೆ ಕರೆದಾಗ ಕೆಲವೇ ನಿಮಿಷಗಳಲ್ಲಿ ಬರುತ್ತೇನೆ ಎಂದು ಹೇಳಿದ್ದ ಅವರು, ಬಳಿಕ ಶಾಲಾ ಪ್ರಿನ್ಸಿಪಾಲ್ ಕ್ಯಾಬಿನ್ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಡಾನ್ ಬಾಸ್ಕೋ ಶಾಲೆಯ ಪ್ರಿನ್ಸಿಪಾಲ್ ಆಗಿ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದ ಫಾ. ಮಹೇಶ್, ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಕಾರಣಕರ್ತರಾಗಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಮುಂದಕ್ಕೆ ಬರುವಂತೆ ಕಾರಣಕರ್ತರಾಗಿದ್ದರು. ಮೌಂಟ್ ರೋಸರಿ ಮತ್ತು ಮಿಲಾಗ್ರಿಸ್ ಸಂತೆಕಟ್ಟೆ ದೇವಾಲಯದಲ್ಲಿ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿದ ಬಳಿಕ ಶಿರ್ವಕ್ಕೆ ವರ್ಗಾವಣೆಗೊಂಡಿದ್ದರು. ತನ್ನ ಸೇವೆಯಿಂದ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಸೇರಿದಂತೆ ಸಾವಿರಾರು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ನಾಳೆ ಬೆಳಿಗ್ಗೆ 10 ಗಂಟೆಯಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ದೇವಾಲಯದ ವಠಾರದಲ್ಲಿ ಫಾ. ಮಹೇಶ್ ಡಿಸೋಜ ರವರ ಅಂತಿಮ ದರ್ಶನ ಮಾಡಲು ಅವಕಾಶವಿದೆ. ಮಧ್ಯಾಹ್ನ 3 ಗಂಟೆಯಿಂದ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನಗಳು ಶಿರ್ವ ಸಾವೊದ್ ಮಾತೆಯ ದೇವಾಲಯದಲ್ಲಿ ನಡೆಯಲಿವೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೋ ರವರ ನೇತೃತ್ವದಲ್ಲಿ, ಉಡುಪಿ ಮಂಗಳೂರು ಧರ್ಮ ಪ್ರಾಂತ್ಯದ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಪ್ರಾರ್ಥನ ವಿಧಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. |