ಮಡಿಕೇರಿಯಲ್ಲಿ ಸರಗಳ್ಳತನ : ಕಳ್ಳನ ಬಂಧನ
ಮಡಿಕೇರಿ: ಯುವತಿಯೋರ್ವಳ ಮೇಲೆ ಹಲ್ಲೆ ನಡೆಸಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಆಕೆಯ ಮೇಲೆ ಅತ್ಯಾಚಾರಕ್ಕೂ ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿಯ ಹೃದಯ ಭಾಗದ ನಂದಿನ ಹಾಲಿನ ಡೈರಿಯ ಮೇಲ್ಭಾಗ ಕಂಪ್ಯೂಟರ್ ಮತ್ತು ಶೀಘ್ರ ಲಿಪಿ ಕಲಿಕಾ ತರಬೇತಿ ಕೇಂದ್ರವೊಂದರಲ್ಲಿ ಶೀಘ್ರ ಲಿಪಿ ತರಬೇತಿ ಪಡೆದು, ಡೈರಿ ಮೇಲಿನ ರಸ್ತೆಯ ಮೂಲಕ ಸಂಜೆ 5 ಗಂಟೆ ವೇಳೆಗೆ ಮನೆಯ ಕಡೆ ತೆರಳುತ್ತಿದ್ದ 32 ವರ್ಷದ ಅವಿವಾಹಿತ ಯುವತಿಯೋರ್ವಳನ್ನು ಯುವಕನೊಬ್ಬ ಅಡ್ಡಗಟ್ಟಿದ್ದಾನೆ. ನಿರ್ಜನ ರಸ್ತೆಯಾದ ಕಾರಣ ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕೈಯಲಿದ್ದ ಮೊಬೈಲ್ ಕಿತ್ತುಕೊಂಡು ಬಳಿಕ ಯುವತಿಯ ಮೇಲೆ ತೀವ್ರ ಹಲ್ಲೆ ನಡೆಸಿ ಪಕ್ಕದಲ್ಲಿದ್ದ ಪೊದೆಗೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ.
ಈ ಸಂದರ್ಭ ಯುವತಿ ಕಿರುಚಿಕೊಂಡಿದ್ದು, ಇದೇ ದಾರಿಯಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಯುವತಿಯ ನೆರವಿಗೆ ಧಾವಿಸುತ್ತಿದ್ದಂತೆಯೇ, ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಕ್ಷಣವೇ ಕಾಯಪ್ರವೃತರಾದ ನಗರ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಠಾಣಾಧಿಕಾರಿ ಷಣ್ಮುಗ ಯುವಕನ ಮುಖ ಚಹರೆ, ಆತ ತೊಟ್ಟಿದ್ದ ಬಟ್ಟೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಆರೋಪಿಯ ವಿರುದ್ದ ಕಲಂ 394, 354, 506 ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
ಜು. 5ರ ಸಂಜೆ ಈ ಕೃತ್ಯ ಎಸಗಿದ ಆರೋಪಿ ಮಡಿಕೇರಿ ರಾಜರಾಜೇಶ್ವರಿ ನಗರ ನಿವಾಸಿ ಪೇಯಿಂಟಿಂಗ್ ಕೆಲಸ ಮಾಡುವ ಅವಿನಾಶ್ ಅಲಿಯಾಸ್ ಅವಿ(29) ಎಂಬುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ನಡೆದ 12 ಗಂಟೆಯಲ್ಲೇ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ 8 ಗ್ರಾಂ ಚಿನ್ನದ ಚೈನು ಮತ್ತು ಸ್ಯಾಮ್ ಸಾಂಗ್ ಕಂಪೆನಿಯ ಒಂದು ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.