ಕಸದಿಂದ ಗೊಬ್ಬರ ಮಾಡಿ ಆದಾಯ ಗಳಿಸಿ : ಜಿ.ಪಂ ಸಿಇಒ ಲಕ್ಷ್ಮಿಪ್ರಿಯಾ ಸಲಹೆ

ಮಡಿಕೇರಿ : ಪ್ರತೀ ಮನೆ ಮನೆಗಳಲ್ಲೂ ಹಸಿ ಕಸ, ಒಣ ಕಸ ಪ್ರತ್ಯೇಕವಾಗಿ ಬೇರ್ಪಡಿಸಿ, ನಂತರ ಅದರಿಂದ ಉತ್ತಮ ಗೊಬ್ಬರ ತಯಾರಿಸಿ ಆದಾಯ ಗಳಿಸಲು ಮುಂದಾಗಬೇಕಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಸಲಹೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್, ವಿರಾಜಪೇಟೆ ತಾಲ್ಲೂಕು ಪಂಚಾಯತ್, ಪೊನ್ನಂಪೇಟೆ ಗ್ರಾಮ ಪಂಚಾಯತ್ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಕ್ಲೀನ್ ಕೂರ್ಗ್ ಇನ್ಸ್‌ಟೀವ್ ಸಂಸ್ಥೆಯ ವತಿಯಿಂದ ಪೊನ್ನಂಪೇಟೆ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆದ ಸ್ವಚ್ಛ ಮೇವ ಜಯತೆ ಜನಾಂದೋಲನ ಕಾರ್ಯಕ್ರಮದ ಕೊಡಗು ಪರಿವರ್ತನ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ಈಗಾಗಲೇ ಬಯಲು ಶೌಚ ಮುಕ್ತ ಜಿಲ್ಲೆಯಾಗಿದ್ದು, ಪ್ರತೀ ಮನೆಗಳಿಗೂ ಶೌಚಾಲಯವನ್ನು ಒದಗಿಸಿಕೊಟ್ಟಿದ್ದು, ಮುಂದಿನ ಹಂತದಲ್ಲಿ ಒಂದು ಶೌಚಾಲಯಕ್ಕೆ ಎರಡು ಶೌಚ ಗುಂಡಿಯನ್ನು ನಿರ್ಮಾಣ ಮಾಡಿ ಒಡಿಎಂ ಪ್ಲಸ್ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು. 

ಸ್ವಚ್ಛ ಭಾರತ್ ಮಿಷನ್ ಜಿಲ್ಲೆಯಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಈ ಸಂಬಂಧ ಶಾಲೆಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಹಸಿ ಕಸ, ಒಣ ಕಸ ಬೇರ್ಪಡಿಸುವಿಕೆ ಬಗ್ಗೆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಗಿದೆ ಎಂದರು. ಸಾರ್ವಜನಿಕರು ಸ್ವಚ್ಛ ಮೇವ ಜಯತೆ ಆಂದೋಲನವನ್ನು ಹೆಚ್ಚಿನ ಬೆಂಬಲ ಹಾಗೂ ಸಹಕಾರ ನೀಡಿ ಕೊಡಗು ಜಿಲ್ಲೆಯನ್ನು ಮತ್ತಷ್ಟು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಕರೆ ನೀಡಿದರು. 

ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷರಾದ ಸುಮಿತಾ ಎಂ.ಜಿ ಅವರು ಮಾತನಾಡಿ ಪ್ರತೀ ಮನೆಗಳಲ್ಲಿ ಹಸಿ ಕಸ, ಒಣ ಕಸವನ್ನು ವಿಂಗಡಣೆ ಮಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸದ ಸಮಸ್ಯೆಯನ್ನು ನಿವಾರಿಸಬಹುದು. ಪೊನ್ನಂಪೇಟೆ ಗ್ರಾ,ಪಂ. ಸ್ವಚ್ಛತಾ ಕಾರ್ಯವನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಅನುಕರಣೆ ಮಾಡಿದರೆ ಸ್ವಚ್ಛ ಕೊಡಗು ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಪರಿವರ್ತನಾ ಮೇಳ ಸಂಬಂಧ ಆಯೋಜಿಸಲಾಗಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಮತ್ತು ಕಸದಿಂದ ರಸ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಸ್ವಚ್ಛತೆ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾ.ಪಂ.ಇಒ ಜಯಣ್ಣ, ವಿರಾಜಪೇಟೆ ತಾ.ಪಂ.ಸದಸ್ಯರಾದ ಆಶಾ ಪೂಣಚ್ಚ, ಕ್ಲೀನ್ ಕೂರ್ಗ್ ಇನ್ಸ್‌ಟೀವ್ ಸಂಸ್ಥೆಯ ಸವಿತಾ ಚಂಗಪ್ಪ, ಅಪರ್ಣಾ, ಪವನ್, ಪೂಜಾ ಉಪಸ್ಥಿತರಿದರು.

Leave a Reply

Your email address will not be published. Required fields are marked *

error: Content is protected !!