ಮತ್ತೆ ಜನರ ಕೈಯಲ್ಲಿ ಹಣ ಓಡಾಡಲಿ: ರಾಹುಲ್
ನವದೆಹಲಿ: ಐದು ನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯೀಕರಣದಂತಹ ವಿಫಲ ನೀತಿಯ ಮೂಲಕ ಜನರ ಕೈಯಲ್ಲಿ ದುಡ್ಡು ಓಡಾಡದ ಹಾಗೆ ಮಾಡಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ, ಹಣದ ಮರುಹಂಚಿಕೆಗೆ ಮುಂದಾಗಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, “ಭಾರತ ಅತ್ಯಂತ ಆಳವಾದ ಆರ್ಥಿಕ ಅವ್ಯವಸ್ಥೆಯಲ್ಲಿದೆ ಎಂದು ಕಳೆದ ಕೆಲ ವರ್ಷಗಳಿಂದ ನಾವು ಹೇಳುತ್ತಾ ಬಂದಿರುವುದನ್ನು ಇದೀಗ ಸ್ವತಃ ಸರ್ಕಾರದ ಆರ್ಥಿಕ ಸಲಹೆಗಾರರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಮ್ಮ ಸಲಹೆಯನ್ನು ಒಪ್ಪಿಕೊಂಡು ಅಗತ್ಯವಿರುವವರ ಕೈಯಲ್ಲಿ ದುಡ್ಡು ಓಡಾಡುವಂತೆ ಮಾಡಿ, ಹಣದ ಮರುಹಂಚಿಕೆ ಮಾಡುವುದೊಂದೇ ಇದಕ್ಕೆ ಪರಿಹಾರ”ಎಂದು ತಿಳಿಸಿದ್ದಾರೆ.
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ “ಪ್ರಸ್ತುತ ಹಿಂದೆಂದೂ ಕಂಡಿಲ್ಲದ ಆರ್ಥಿಕ ಬಿಕ್ಕಟ್ಟು ಎದುರಾಗಿದೆ” ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿಯವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 70 ವರ್ಷಗಳಲ್ಲಿ ಈ ಬಗೆಯ ಸನ್ನಿವೇಶ ಕಂಡುಬಂದಿರಲಿಲ್ಲ, ದೇಶದ ಸಂಪೂರ್ಣ ಆರ್ಥಿಕ ವ್ಯವಸ್ಥೆ ಅಪಾಯದಲ್ಲಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ