ಅರುಣ್ ಜೇಟ್ಲಿ ಆರೋಗ್ಯ ಮತ್ತಷ್ಟು ಕ್ಷೀಣ: ಏಮ್ಸ್ ಆಸ್ಪತ್ರೆ ಮೂಲಗಳು

ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.

ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ಅರುಣ್ ಜೇಟ್ವಿ ಅವರು ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 

ಆಸ್ಪತ್ರೆಗೆ ದಾಖಲಾಗಿರುವ ಅರುಣ್ ಜೇಟ್ಲಿ ಅವರ ಆರೋಗ್ಯ ವಿಚಾರಿಸಲು ನಿನ್ನೆ ಉಮಾಭಾರತಿ ಅವರು ಆಗಮಿಸಿದ್ದರು. ಅಂತೆಯೇ ಕಳೆದ ಸೋಮವಾರ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಬಿಜೆಪಿ ಸಂಸದೆ ಮೇನಕಾ ಗಾಂಧಿ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಇದೇ ಆಗಸ್ಟ್ 9ರಂದು ಉಸಿರಾಟದ ತೊಂದರೆ, ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದಾಗಿ ಬಳಲುತ್ತಿದ್ದ  66 ವರ್ಷದ ಅರುಣ್ ಜೇಟ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಕಳೆದ ಎನ್‍ಡಿಎ ಸರ್ಕಾರದ ಅವಧಿಯ ಅಂತಿಮ ಬಜೆಟ್ ವೇಳೆಯೂ ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪರಿಣಾಮ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯೆಲ್ ಅವರು ಬಜೆಟ್ ಮಂಡನೆ ಮಾಡಿದ್ದರು. ಇದಕ್ಕೂ ಮುನ್ನ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೂರು ತಿಂಗಳ ಕಾಲ ಸುದೀರ್ಘ ರಜೆ ಪಡೆದಿದ್ದ ಅರುಣ್ ಜೇಟ್ಲಿ ಅವರು ಆ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಅವಧಿಯಲ್ಲೂ ಸಚಿವ ಪಿಯೂಷ್ ಗೋಯಲ್ ಅವರು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!