ಕೊಡಗಿನಲ್ಲಿ ಮಳೆ ಮಾಯ; ಕಳೆ ಕಳೆದುಕೊಂಡ ಜಲಪಾತಗಳು. ಪ್ರವಾಸಿಗರಿಗೆ ನಿರಾಶೆ

ಮಡಿಕೇರಿ: ಮಳೆ, ಗಾಳಿ, ಚಳಿ, ಮಂಜು ಈ ವಾತಾವರಣ ಕಾವೇರಿ ತವರು ಕೊಡಗಿನ ಆಸ್ತಿ. ಪ್ರತಿವರ್ಷ ಜೂನ್ ಆರಂಭವಾಯಿತ್ತೆಂದರೆ ಮಳೆಗಾಲದ ಸೊಬಗು ಜಿಲ್ಲೆಯ ಸೊಬಗನ್ನು ಶ್ರೀಮಂತಗೊಳಿಸುತ್ತದೆ. ಆದರೆ ಈ ವರ್ಷ ಮಳೆಯ ಆಗಮನವೇ ಆಗದ ಕಾರಣ ಪ್ರಕೃತಿಯ ಮಡಿಲಿನ ಜಲಪಾತಗಳು ಸೊರಗಿವೆ. ಜಲಪಾತಗಳು ಜೀವಜಲವಿಲ್ಲದೆ ಕಲೆಗುಂದಿವೆ. ಜಿಲ್ಲೆಯ ಪ್ರಮುಖ ಹೆಸರುವಾಸಿ ಜಲಪಾತಗಳಾದ ಅಬ್ಬಿಫಾಲ್ಸ್, ಮಲ್ಲಳ್ಳಿ, ಇರ್ಪು, ಚೇಲಾವರ ಮಳೆಯಿಲ್ಲದೆ ಮಂಕಾಗಿದೆ.

ಮಳೆಗಾಲವಾದರೂ ಮಾನ್ಸೂನ್ ಟೂರಿಸಂ ಪರಿಕಲ್ಪನೆಯಡಿ ಕೊಡಗಿನ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಮಳೆಗಾಲದಲ್ಲೂ ಸುಡುವ ಬಿಸಿಲು, ಬತ್ತಿಹೋದ ಜಲಮೂಲಗಳನ್ನು ಕಂಡು ನಿರಾಶೆಯಿಂದ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕಳೆದ ಬಾರಿ ಈ ಜಲಪಾತಗಳೆಲ್ಲ ಬೋರ್ಗರೆಯುತ್ತಾ ಧುಮ್ಮಿಕ್ಕುವ ಮೂಲಕ ತಮ್ಮ ಸೊಬಗನ್ನು ಪ್ರವಾಸಿಗರಿಗೆ ಉಣ ಬಡಿಸಿದ್ದವು. ಆದರೆ ಈ ಬಾರಿಯ ಸ್ಥಿತಿ ಮಾತ್ರ ಭಿನ್ನವಾಗಿದೆ. ಮಡಿಕೇರಿಯ ಅಬ್ಬಿ ಫಾಲ್ಸ್‌ನ್ನು ನೋಡಲೆಂದು ವಿಕೆಂಡ್ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಜಲಪಾತದ ಸೊಬಗು ಮಾತ್ರ ಕಣ್ಮರೆಯಾಗಿತ್ತು. ಕಳೆದ ಮಳೆಗಾಲದಲ್ಲಿ ಅಬ್ಬಿ ಜಲಪಾತದ ಬಳಿಯೇ ಸಂಭವಿಸಿದ ಭೂ ಕುಸಿತದಿಂದ ಅಲ್ಲಿದ್ದ ತೂಗು ಸೇತುವೆಗೆ ಭಾಗಶ: ಹಾನಿಯಾಗಿದ್ದು, ಇಂದಿಗೂ ದುರಸ್ತಿ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ.

ಇನ್ನು ಪುಷ್ಪಗಿರಿ ತಪ್ಪಲಿನಲ್ಲಿರುವ ಮಲ್ಲಳ್ಳಿ ಜಲಪಾತದಲ್ಲೂ ಹೇಳಿಕೊಳ್ಳುವಷ್ಟು ನೀರಿಲ್ಲ. ಇಲ್ಲಿಗೂ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮಲ್ಲಳ್ಳಿ ಜಲಪಾತದ ಸಹಜ ಮುದವೇ ಮಾಯವಾಗಿದೆ. ಪ್ರವಾಸಿಗರನ್ನು ತನ್ನ ಒಡಲಿನವರೆಗೂ ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಹನಿಗಳು ಬಹುದೂರದವರೆಗೆ ತನ್ನ ಸಿಂಚನ ಮೂಡಿಸುತ್ತದೆ. ಈ ನೀರಿನ ಹನಿಗಳಲ್ಲಿ ಮಿಂದೇಳುವುದೇ ಪ್ರವಾಸಿಗರಿಗೆ ಸ್ವರ್ಗಾನುಭವ. ಬೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಕನ್ಯೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಮಾಂಚನ. ಆದರೆ ಪುಷ್ಪಗಿರಿ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗದಿರುವುದರಿಂದ ಮಲ್ಲಳ್ಳಿ ಸಹಜವಾಗಿಯೇ ಸೊರಗಿದೆ.

ನಾಪೋಕ್ಲು ಸಮೀಪದ ಚೇಲಾವರ ಮತ್ತು ದಕ್ಷಿಣ ಕೊಡಗಿನ ಇರ್ಪು ಜಲಪಾತಗಳ ಸ್ಥಿತಿಯೇನು ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವುದಕ್ಕೆ ಈ ಜಲಪಾತಗಳು ಕೂಡ ಮೂಕ ಸಾಕ್ಷಿ ಹೇಳುತ್ತಿವೆ. ನೈಸರ್ಗಿಕವಾಗಿ ಹಚ್ಚ ಹಸಿರಿನ ಪರಿಸರದ ನಡುವೆ ಕಲ್ಲು ಬಂಡೆಗಳನ್ನು ಸವರುತ್ತಾ ಧುಮ್ಮಿಕ್ಕುವ ಈ ಜಲಪಾತಗಳಿಗೆ ಮಳೆ ಮತ್ತು ಜಲ ನೀರೇ ಆಧಾರ. ಮಳೆಯ ಕೊರತೆ ಮತ್ತು ಅಂತರ್ಜಲ ಏರಿಕೆಯಾಗದಿರುವುದರಿಂದ ಜಲಪಾತಗಳು ಜೀವಕಳೆ ಕಳೆದುಕೊಂಡಿವೆ.

Leave a Reply

Your email address will not be published. Required fields are marked *

error: Content is protected !!