ಕೃಷಿ ಸಂಸ್ಕೃತಿಯ ನಾಡು ತುಳುನಾಡು : ಸುಜಾತ ಶೆಟ್ಟಿ
ಉಡುಪಿ: ತುಳುನಾಡಿನದ್ದು ಕೃಷಿ ಸಂಸ್ಕೃತಿ. ತುಳುವ ಪ್ರಕೃತಿ-ಸಂಸ್ಕೃತಿ ಉಳಿಯಬೇಕಾದರೆ ಹಿರಿಯರು ಉತ್ತು-ಬಿತ್ತಿ ಬದುಕನ್ನು ರೂಪಿಸುತ್ತಿದ್ದ ಕೃಷಿಭೂಮಿ ಹಡೀಲು ಬೀಳುವುದನ್ನು ತಡೆದು ಮತ್ತೆ ಹಸಿರನ್ನು ನಾವು ಹೊದೆಸಬೇಕಾಗಿದೆ. ಹಿಂದೂ-ಕ್ರೈಸ್ತ-ಮುಸ್ಲಿಂ ಮತ ಧರ್ಮ ಯಾವುದೇ ಆದರೂ ಎಲ್ಲರನ್ನು ಒಂದಾಗಿಸುವ ತಾಕತ್ತು ತುಳು ಭಾಷೆಗಿದೆ, ತುಳುನಾಡಿನ ದೈವಗಳಿಗಿದೆ. ತುಳು ನಾಡಿನ ಮಾತೆಯರು ತಮ್ಮ ಮಕ್ಕಳು ಅದನ್ನು ಮಾಡಲಾರರು, ಇದನ್ನು ತಿನ್ನಲಾರರು ಎನ್ನದೇ ಭಾಷೆ, ಆಚಾರ-ವಿಚಾರ ಸಂಸ್ಕೃತಿಯ ಅನುಭವಗಳನ್ನು ಹಂಚಿ ಬೆಳೆಸಬೇಕಿದೆ ಎಂದು ಮೂಡಬಿದ್ರೆ ಮಹಾವೀರ ಕಾಲೇಜು ಉಪನ್ಯಾಸಕಿ ಸುಜಾತ ಶೆಟ್ಟಿ ಹೇಳಿದರು. ಉಡುಪಿ ಜಿಲ್ಲಾ ಕೃಷಿಕ ಸಂಘ, ಪೆರಂಪಳ್ಳಿ ವಲಯ ಸಮಿತಿ ಆಯೋಜಿಸಿದ್ದ ಆಟಿದ ಕಮ್ಮೆನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದ ಅವರು ನಮ್ಮ ಹಿರಿಯರಿಗೆ “ಆಟಿ(ಆಷಾಢ)ತಿಂಗಳು ಊಟಕ್ಕೂ ತತ್ವಾರದ ಕಷ್ಟದ ದಿನಗಳಾಗಿದ್ದವು. ಆದರೂ ಪ್ರಕೃತಿಯೊಂದಿಗೆ ಹೊಂದಿಕೊಂಡು ನೆರೆಹೊರೆಯವರೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದರು ವಿಪರೀತ ಮಳೆ ಬೀಳುತ್ತಿದ್ದ ಆ ಕಾಲಕ್ಕೆ ಬಾಧಿಸದಂತಹ ನೆರೆ ಹಾವಳಿ ಈಗ ಅಲ್ಪ ಮಳೆಗೆ ಬಹಳ ಸಮಸ್ಯೆ ಉಂಟುಮಾಡುತ್ತಿದೆ. ಬೇಸಿಗೆಯ ನೀರಿನ ಸಮಸ್ಯೆಗೂ ತುಳುನಾಡ ಸಂಸ್ಕೃತಿಯಲ್ಲಿ ಪರಿಹಾರವಿದೆ ಎಂದರು.
ಕೃಷಿಕ ಸಂಘದ ವಲಯ ಸಮಿತಿಯ ಸುಬ್ರಹ್ಮಣ್ಯ ಶ್ರೀಯಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಉದ್ಘಾಟಿಸಿದರು.ನಗರಸಭಾ ಸದಸ್ಯೆ ಸೆಲಿನ್ ಕರ್ಕಡ, ಹಿರಿಯ ಕೃಷಿಕ ಅಂತಪ್ಪ ಪೂಜಾರಿ, ‘ಸಿರಿಚಾವಡಿ’ಯ ಈಶ್ವರ ಚಿಟ್ಪಾಡಿ, ಶ್ರೀನಿವಾಸ ಮಲ್ಲಂಪಳ್ಳಿ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಕೃಷಿಕರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದ ವಿವಿಧ ೬೦ ಬಗೆಯ ಖಾದ್ಯಗಳನ್ನು ಸೇರಿದ ಜನತೆಗೆ ಉಣಬಡಿಸಿದರು. ಸಭೆಯಲ್ಲಿ ರಾಘವೇಂದ್ರ ಭಟ್ ತಾಂಗೋಡು, ರಾಫೈಲ್ ಡಿಸೋಜ, ಶಂಕರ ಕೋಟ್ಯಾನ್, ಜೋಸಿ ಪಿಂಟೊ, ರಾಘವೇಂದ್ರ ಭಟ್ ಪೆರಂಪಳ್ಳಿ, ಪೀಟರ್ ಡಿಸೋಜ, ಶಶಿಧರ ರಾವ್, ರೋಸಿ ಪಿಂಟೊ, ರವೀಂದ್ರ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಶೀಂಬ್ರ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.