ಕೆಪಿಸಿಸಿ ಸಾರಥ್ಯ ಡಿ.ಕೆ.ಶಿವಕುಮಾರ್ ಹೆಗಲಿಗೆ?

ನವದೆಹಲಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಡುವೆ ಆರೋಪ ಪ್ರತ್ಯಾರೋಪ ತೀವ್ರಗೊಂಡಿರುವ ಬೆನ್ನೆಲ್ಲೇ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಲಾಬಿ ನಡೆಸಿ ಅದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ಪ್ರತಿಪಕ್ಷ ಹುದ್ದೆ ತಪ್ಪಿಸುವ, ಪಕ್ಷದಲ್ಲಿ ಅವರ ಹಿಡಿತ ಕಡಿಮೆ ಮಾಡುವ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಾವೇ ಪಡೆದುಕೊಳ್ಳುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ವರಿಷ್ಠರ ಮೇಲೆ ಪ್ರಭಾವ ಬೀರುವ ಯತ್ನದಲ್ಲಿ ನಿರತರಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿದ ಶಿವಕುಮಾರ್, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಸಹ ಆರೋಪಿಸಿರುವುದಾಗಿ ತಿಳಿದು ಬಂದಿದೆ. 

ಡಿಕೆಶಿ ಹಾಗೂ ಸೋನಿಯಾ ಗಾಂಧಿ ಅವರ ಮಧ್ಯೆ ವಿಸ್ತೃತ ಸಂಭಾಷಣೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಡಿಕೆಶಿಗೆ ಸೋನಿಯಾ ಗಾಂಧಿ ತಿಳಿಸಿದ್ದು, ಇದಕ್ಕೆ ಡಿಕೆಶಿ ಸಹ ಕೆಲ ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ದೆಹಲಿಯಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನು ಯಾವುದೇ ಸ್ಥಾನಕ್ಕೂ ಅರ್ಜಿ ಹಾಕಿಕೊಂಡು ಓಡಾಡುವುದಿಲ್ಲ. ಸುಮ್ಮನೆ ಟಿವಿಯಲ್ಲಿ ನನ್ನ ಹೆಸರು ಹಾಕುತ್ತೀರಿ. ಹೀಗೆ ಹಾಕಿ ನನಗೆ ಯಾವ ಹುದ್ದೆಯೂ ಸಿಗದಂತೆ ಮಾಡುತ್ತೀರಿ ಎಂದರು.

Leave a Reply

Your email address will not be published. Required fields are marked *

error: Content is protected !!