ಕೊಡವೂರು ಶ್ರೀ ಶಂಕರನಾರಾಯಣ ದೇವಳ: ರಾಯರ ಆರಾಧನಾ ಮಹೋತ್ಸವ
ಗುರುರಾಘವೇಂದ್ರ ರಾಯರೆಂಬ ವ್ಯಕ್ತಿಯೊಳಗೆ ಶ್ರೀ ರಾಮಚಂದ್ರನೆಂಬ ಶಕ್ತಿ ಮಿಳಿತಗೊಂಡು ಭಕ್ತ ಜನರನ್ನು ಅನುಗ್ರಹಿಸುತ್ತಿದ್ದು ಏಕಾಂತದಲ್ಲಿ ಏಕ ಚಿತ್ತ ಹಾಗು ಏಕ ಭಾವದಿಂದ ಪ್ರಾರ್ಥಿಸಿದಾಗ ಗುರು ರಾಘವೇಂದ್ರ ರಾಯರು ನಮ್ಮೆಲ್ಲ ಕೋರಿಕೆಗಳಿಗೆ ಅಸ್ತು ಎನ್ನುತ್ತಾರೆ ಎಂದು ಕಕ್ಕುಂಜೆ ಸಿದ್ದಿವಿನಾಯಕ ದೇವಳದ ಧರ್ಮ ದರ್ಶಿ ನಾಗಾನಂದ ವಾಸುದೇವ ಆಚಾರ್ಯ ರು ಅಭಿಪ್ರಾಯ ಪಟ್ಟರು.
ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಗುರು ರಾಘವೇಂದ್ರ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಕಲಿಯುಗದ ಕಲ್ಪತರು ಗುರು ರಾಘವೇಂದ್ರ ರಾಯರ ಮಹಿಮೆ ಇಂದಿಗೂ ಜೀವಂತ ,ಹಾಗಾಗಿ ಅಂತಹ ಮಹಾಮಹಿಮರ ಆರಾಧನೆ ನಿರಂತರ ನಡೆಯುತ್ತಿರಲಿ ಎಂದು ಹಾರೈಸಿದರು.
ಶ್ರೀ ದೇವಳದ ಪ್ರಧಾನ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿಗಳು ಆಶೀರ್ವಚನ ನೀಡಿದರು. ಇನ್ನೋರ್ವ ಅತಿಥಿ ಇಂದ್ರಾಳಿ ಪಂಚ ದುರ್ಗಾ ದೇವಸ್ಥಾನ ದ ಮೊಕ್ತೇಸರ ಜಯಕರ ಶೆಟ್ಟಿಯವರು ಶ್ರೀ ದೇವಳದ ಸಿಬ್ಬಂದಿಗಳಿಗೆ ವ್ಯವಸ್ಥಾಪನಾ ಸಮಿತಿಯಿಂದ ಕೊಡಮಾಡಲ್ಪಟ್ಟ ಆರೋಗ್ಯ ವಿಮೆಯನ್ನು ಹಸ್ತಾಂತರಿಸಿದರು. ಶ್ರೀ ಶಂಕರನಾರಾಯಣ ಭಕ್ತವೃಂದದ ಅಧ್ಯಕ್ಷ ರವಿರಾಜ ಹೆಗ್ಡೆ, ಸದಸ್ಯ ರಾಜ ಸೇರಿಗಾರ್ ಉಪಸ್ಥಿತರಿದ್ದರು .
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ದನ ಕೊಡವೂರು ಧನ್ಯವಾದವಿತ್ತರು. ಕಾವ್ಯ ಸೀತಾರಾಮ್ ಪ್ರಾರ್ಥಿಸಿದರು.