‘ಕೊಡಗ್‌ರ ಸಿಪಾಯಿ’ ಚಿತ್ರೀಕರಣ ಆರಂಭ
ಮಡಿಕೇರಿ : ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್‌ನಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ನಿರ್ದೇಶನದ ಕೊಡವ ಕಾದಂಬರಿ ಆಧಾರಿತ ‘ಕೊಡಗ್‌ರ ಸಿಪಾಯಿ’ ಚಲನಚಿತ್ರದ ಚಿತ್ರೀಕರಣಕ್ಕೆ ಇಂದು ಮುಕ್ಕೋಡ್ಲುವಿನಲ್ಲಿ ಚಾಲನೆ ದೊರೆಯಿತು.
ವ್ಯಾಲಿಡ್ಯೂ ಹೋಮ್ಸ್‌ಸ್ಟೇಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಕ್ಲಾಪ್ ಮಾಡಿ ಕೊಡವ ಚಲನಚಿತ್ರಕ್ಕೆ ಶುಭ ಕೋರಿದರು.ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊಡವ ಚಲನಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳು ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಲಿ ಎಂದು ಕರೆ ನೀಡಿದರು.
ಈ ಹಿಂದೆ ಕೊಡವ ಸಿನಿಮಾಗಳು ಅಷ್ಟೊಂದು ಜನಪ್ರಿಯತೆಯನ್ನು ಗಳಿಸಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಹಾಗೂ ಉತ್ತಮ ನಟನೆಯಿಂದ ಜನಾಕರ್ಷಣೆ ಪಡೆಯುತ್ತಿದೆ ಎಂದರು. ಕೊಡಗಿನ ನೈಜ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವ ಕಾರ್ಯವನ್ನು ಕೊಡವ ಚಲನಚಿತ್ರಗಳು ಮಾಡಬೇಕಾಗಿದೆ ಎಂದು ಕಂಡ್ರತಂಡ ಸುಬ್ಬಯ್ಯ ಸಲಹೆ ನೀಡಿದರು.
ಚಿತ್ರ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಮಾತನಾಡಿ ಕೊಡವ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಕೊಡಗ್‌ರ ಸಿಪಾಯಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಕೊಡಗಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.
ಸಹನಿರ್ದೇಶಕ ಕೌಶಿಕ್ ಮಾತನಾಡಿ, ಈ ಹಿಂದೆ ಕೊಡಗಿನ ಪರಿಸರದಲ್ಲಿ ಬಾಕೆಮನೆ ಎಂಬ ಸಿನಿಮಾ ನಿರ್ಮಿಸಲಾಗಿತ್ತು. ಇಲ್ಲಿನ ಜನರು ತೋರುವ ಪ್ರೀತಿ ಮರೆಯಲು ಸಾಧ್ಯವಿಲ್ಲ, ಈ ಸುಂದರ ಪರಿಸರ ಪ್ರತಿಯೊಬ್ಬರನ್ನು ಆಕರ್ಷಿಸುವುದಲ್ಲದೆ ಸನಿಮಾ ಮಂದಿಗೆ ಪ್ರೇರಣೆಯನ್ನು ನೀಡುತ್ತದೆ ಎಂದರು.ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಇಡೀ ದಕ್ಷಿಣ ಭಾರತ ಉಳಿಯಬೇಕಾದರೆ ಕೊಡಗಿನ ಪರಿಸರ ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.
ಕೊಡಗಿಗೆ ಬರುವ ಪ್ರವಾಸಿಗರು ಕೊಡಗಿನ ಪರಿಸರವನ್ನು ಅನುಭವಿಸುವ ಮೂಲಕ ತಮ್ಮ ಪ್ರದೇಶಗಳಿಗೆ ತೆರಳಿ ಇಲ್ಲಿನ ಆಚಾರ, ವಿಚಾರ ಸಂಸ್ಕೃತಿಯ ಸಂದೇಶವನ್ನು ಸಾರುವ ಕೆಲಸ ಆಗಬೇಕು ಎಂದರು. ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಚಿತ್ರದ ನಾಯಕ ಖ್ಯಾತ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷೆ ಸವಿತಾರೈ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ವ್ಯಾಲಿಡ್ಯೂ ಹೋಂ ಸ್ಟೇ ಮಾಲೀಕ ಅಂಚೆಟ್ಟಿರ ಮನುಮುದ್ದಪ್ಪ ಹಾಗೂ ಚಿತ್ರದ ತಂಡ ಮುಹೂರ್ತ ಸಂದರ್ಭ ಹಾಜರಿದ್ದರು.ಕೊಡಗ್‌ರ ಸಿಪಾಯಿ ಕೊಡವ ಚಲನಚಿತ್ರ, ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿ, ಕೊಡವ ಮಕ್ಕಡ ಕೂಟ ಸಂಘಟನೆ ಪ್ರಕಟಿಸಿರುವ ಕೊಡವ ಕಾದಂಬರಿ ಆಧಾರಿತ ಚಿತ್ರವಾಗಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಕೊಡಗಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಳ್ಳಲಿದೆ.
ದೇಶ ಕಾಯುವ ಸೈನಿಕನೊಬ್ಬ ನಿವೃತ್ತಿಯ ನಂತರ ತವರು ಜಿಲ್ಲೆ ಕೊಡಗಿಗೆ ಆಗಮಿಸಿ ಹೋಂಸ್ಟೇ ನಡೆಸುವ ಮೂಲಕ ತಮ್ಮ ಜೀವನವನ್ನು ಯಾವ ರೀತಿ ಸಾಗಿಸುತ್ತಾರೆ ಮತ್ತು ಆ ಹೊಂಸ್ಟೇಯಲ್ಲಿ ನಡೆಯುವ ಅನಾಹುತ, ಸವಾಲುಗಳ ಸುತ್ತ ಕಥಾ ಹಂದರ ಸಾಗಲಿದೆ. ಬಿದ್ದಪ್ಪ ಎಂಬ ಪ್ರಮುಖ ಪಾತ್ರದ ಸುತ್ತ ಕಥೆಯನ್ನು ಹೆಣೆಯಲಾಗಿದೆ.
ಗೌರಿವೆಂಕಟೇಶ್ ಛಾಯಾಗ್ರಹಣ, ಮಂಜು ಪಾಂಡವಪುರ ಸಹನಿರ್ದೇಶನ ಹಾಗೂ ಕೌಶಿಕ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದು, ಕೊಡಗಿನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸುತ್ತಿದ್ದಾರೆ.