ಆರೋಗ್ಯ ಕಾರ್ಡ್ ಸದುಪಯೋಗಕ್ಕೆ ಕೆ.ಎಂ.ಸಿ ವಿಭಾಗ ಮನವಿ
ಮಡಿಕೇರಿ: ಸಾಮಾನ್ಯ ಜನತೆಗೂ ಕಡಿಮೆ ವೆಚ್ಚದ ಚಿಕಿತ್ಸಾ ಸೌಲಭ್ಯ ದೊರೆಯಬೇಕು ಎನ್ನುವ ಉದ್ದೇಶದಿಂದ ಕಳೆದ 19 ವರ್ಷಗಳ ಹಿಂದೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಂಸ್ಥೆಯು ಆರೋಗ್ಯ ಕಾರ್ಡ್ ಯೋಜನೆಯನ್ನು ಪರಿಚಯಿಸಿದ್ದು, ಸಂಸ್ಥೆ ಇದೀಗ ತನ್ನ ಸಾಮಾಜಿಕ ಕಳಕಳಿಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿಕೊಂಡಿದೆ ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಉಪ ವ್ಯವಸ್ಥಾಪಕ ರಾಕೇಶ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ಭಾರತ ದೇಶದಲ್ಲೇ ಅತೀದೊಡ್ಡ ವಿಮಾರಹಿತ ಮತ್ತು ಸರ್ಕಾರೇತರ ಆರೋಗ್ಯ ಕಾಳಜಿಯ ಯೋಜನೆಯು ಕರಾವಳಿ ಕರ್ನಾಟಕದಲ್ಲಿರುವ ಮಣಿಪಾಲ ಸಮೂಹದ ಆಸ್ಪತ್ರೆಗಳಾದ ಕೆಎಂಸಿ ಆಸ್ಪತ್ರೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೆಎಂಸಿ ಆಸ್ಪತ್ರೆ ಅತ್ತಾವರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಹಾಗೂ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳಕ್ಕೆ ಅನ್ವಯಿಸುತ್ತದೆ. ಪ್ರಪ್ರಥಮ ಬಾರಿಗೆ ಪ್ರಸಕ್ತ ವರ್ಷದಿಂದ ಗೋವಾದಲ್ಲಿರುವ ಮಣಿಪಾಲ್ ಆಸ್ಪತ್ರೆಯನ್ನು ಕೂಡ ಈ ಯೋಜನೆಯಡಿಯಲ್ಲಿ ಸೇರಿಸಲಾಗಿದೆ. ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ಡೆಂಟಲ್ ಕಾಲೇಜುಗಳಾದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಇಲ್ಲಿ ಕೂಡ ದಂತ ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಯೋಜನೆಯ ಅವಧಿ ಮತ್ತು ಶುಲ್ಕದ ಬಗ್ಗೆ ಮಾತನಾಡುತ್ತಾ ಮಣಿಪಾಲ ಆರೋಗ್ಯ ಕಾರ್ಡಿನ ಅವಧಿಯು 1 ವರ್ಷ ಮತ್ತು 2 ವರ್ಷಗಳಿಗೆ ಲಭ್ಯವಿದ್ದು ಅರ್ಜಿದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮಣಿಪಾಲ ಆರೋಗ್ಯ ಕಾರ್ಡಿನ ಸದಸ್ಯತನ ಶುಲ್ಕ ವ್ಯಕ್ತಿಗತ ಕಾರ್ಡಿಗೆ ಒಂದು ವರ್ಷಕ್ಕೆ ಕೇವಲ ರೂ. 250 ಮತ್ತು ಎರಡು ವರ್ಷಕ್ಕೆ ರೂ.400. ಕೌಟುಂಬಿಕ ಕಾರ್ಡ್‌ಗೆ ಒಂದು ವರ್ಷಕ್ಕೆ ರೂ. 500 ರೂಪಾಯಿಗಳು ಮತ್ತು ಎರಡು ವರ್ಷಕ್ಕೆ ರೂ. 700 ಆಗಿರುತ್ತದೆ. ಕೌಟುಂಬಿಕ ಕಾರ್ಡ್‌ನಲ್ಲಿ- ಕಾರ್ಡ್‌ದಾರರು, ಅವರ ಸಂಗಾತಿ ಮತ್ತು 25 ವರ್ಷ ವಯಸ್ಸಿಗಿಂತ ಕೆಳಗಿನ ಎಲ್ಲಾ ಅವಲಂಬಿತ ಮಕ್ಕಳು ಯೋಜನೆಯ ಲಾಭ ಪಡೆಯಬಹುದು.
ಈ ವರ್ಷದಿಂದ ಫ್ಯಾಮಿಲಿ ಪ್ಲಸ್ ಎಂಬ ಯೋಜನೆ ಲಭ್ಯವಿದ್ದು, ಇದಕ್ಕೆ ಒಂದು ವರ್ಷಕ್ಕೆ ರೂ. 650 ಹಾಗೂ ಎರಡು ವರ್ಷಕ್ಕೆ ರೂ. 850 ಆಗಿರುತ್ತದೆ. ಈ ಯೋಜನೆಯಡಿ ಕಾರ್ಡ್‌ದಾರರು, ಅವರ ಸಂಗಾತಿ ಮತ್ತು 25 ವರ್ಷ ವಯಸ್ಸಿಗಿಂತ ಕೆಳಗಿನ ಎಲ್ಲಾ ಅವಲಂಬಿತ ಮಕ್ಕಳು ಹಾಗೂ ಕಾರ್ಡ್‌ದಾರರು ಮತ್ತು ಅವರ ಸಂಗಾತಿಯ ಹೆತ್ತವರು (4 ಜನ) ಒಳಗೊಳ್ಳುತ್ತಾರೆ. ನವೀಕರಿಸುವ ಕಾರ್ಡ್‌ಗಳಿಗೆ, ಸದಸ್ಯತ್ವ ಶುಲ್ಕದಲ್ಲಿ 10% ರಿಯಾಯಿತಿ ಇರುತ್ತದೆ ಎಂದರು.
ಕೆ.ಎಂ.ಸಿ. ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮನಮೋಹನ್ ಡಿ.ಬಿ. ಮಾತನಾಡಿ ಆರೋಗ್ಯ ಕಾರ್ಡ್‌ನ ಸೌಲಭ್ಯಗಳ ಬಗ್ಗೆ ಮಾತನಾಡಿ, ಯಾವುದೇ ತಜ್ಞ ವೈದ್ಯರ ಜೊತೆಗಿನ ಕನ್ಸಲ್ಟೇಶನ್‌ಗೆ ಶೇ. 50 ರ ರಿಯಾಯಿತಿಯನ್ನು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನಲ್ಲಿ ನೀಡಲಾಗಿದೆ. ಪ್ರಯೋಗಾಲಯದ ತಪಾಸಣೆಗೆ ನೇರ ಶೇ. 20 ರಿಯಾಯಿತಿ, ಎಕ್ಸ್ ರೇ/ಸಿಟಿ/ಎಂಆರ್‌ಐ/ಅಲ್ಟ್ರಾಸೌಂಡ್ ಇವುಗಳಿಗೆ ಶೇ. 15 ರಿಯಾಯಿತಿ ಮತ್ತು ಹೊರರೋಗಿ ಪ್ರೊಸೀಜರ್‌ಗೆ ಶೇ. 10 ರಿಯಾಯಿತಿಯನ್ನು ಕೂಡ ನೀಡಲಾಗುವುದು. ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಜನರಲ್ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ ರೋಗಿಯ ಬಿಲ್ಲಿನಲ್ಲಿ (ಕನ್ಸುಮೇಬಲ್ಸ್ ಮತ್ತು ಫಾರ್ಮೆಸಿ ಹೊರತುಪಡಿಸಿ) ಶೇ. 25 ರಿಯಾಯತಿ ಮತ್ತು ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ವೃತ್ತ ಇಲ್ಲಿ ಶೇ. 10 ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಪಾಜೆ ಪ್ರತೀಶ್ ಎ.ಎಸ್, ಹಾಲುಗುಂದ ಪೊನ್ನಪ್ಪ ಹಾಗೂ ಮಡಿಕೇರಿ ಪದ್ಮನಾಭ ಉಪಸ್ಥಿತರಿದ್ದರು.