ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಶಾಸಕರ ರಾಜೀನಾಮೆಯ ಬೃಹನ್ನಾಟಕಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಬಹುಮತ ಸಾಬೀತು ಪಡಿಸಿ ಹೊಸ ಸರ್ಕಾರ ರಚಿಸುವುದೊ ಅಥವಾ ಚುನಾವಣೆಯ ಕದ ತಟ್ಟುವರೋ ಎನ್ನುವ ಬೇಸರದ ಕುತೂಹಲ ಜನರಲ್ಲಿ ಮೂಡಿದೆ.
ಸಂಜೆಯೊಳಗೆ ಖುದ್ದಾಗಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ರಾಜೀನಾಮೆ ಸ್ವೀಕರಿಸದ ಕುರಿತು 10 ಅತೃಪ್ತ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿ‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸ್ಪೀಕರ್ ಭೇಟಿ ವೇಳೆ ಸೂಕ್ತ ಭದ್ರತೆ ‌ಒದಗಿಸಲು ತಿಳಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್‌ ರೊಹಟ್ಗಿ, ‘ಈಗಾಗಲೇ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೂ ಸ್ಪೀಕರ್ ರಾಜೀನಾಮೆ ಸ್ವೀಕರಿಸಿಲ್ಲ’ ಎಂದು ವಾದ ಮಂಡಿಸಿದರು.
‘ಮುಂಬೈನಿಂದ ಬೆಂಗಳೂರಿಗೆ ತೆರಳಿ ಖುದ್ದಾಗಿ ಭೇಟಿ ಮಾಡಿದ ‌ನಂತರ, ಸ್ಪೀಕರ್ ಎಲ್ಲ ಶಾಕಸರ ವಿಚಾರಣೆ ನಡೆಸಲಿ’ ಎಂದು ಪೀಠ ಹೇಳಿದೆ.
ಕುಮಾರಕೃಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನಾನ್ಯಾಕೆ ರಾಜೀನಾಮೆ ನೀಡಲಿ. ಅದರ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.
‘2009–10ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 8 ಸಚಿವರು ಸೇರಿ 18 ಶಾಸಕರು ರಾಜೀನಾಮೆ ನೀಡಿದ್ದರು. ಆಗ ಏನಾಗಿತ್ತು?. ಅವರು ರಾಜೀನಾಮೆ ನೀಡಿದ್ದರಾ?’ ಎಂದರು.
ಕುಮಾರಕೃಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವ ಸಭೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಗುಲಾಂ ನಭಿ ಆಜಾದ್‌, ಸಾ.ರಾ. ಮಹೇಶ್‌, ಜಿ. ಪರಮೇಶ್ವರ್‌, ಕೆ.ಸಿ.ವೇಣುಗೋಪಾಲ್‌, ದಿನೇಶ್‌ ಗುಂಡುರಾವ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಭಾಗಿಯಾಗಿದ್ದರು. ಒಂದು ತಾಸಿಗೂ ಹೆಚ್ಚು ಸಮಯ ಸಭೆ ನಡೆಯುತ್ತಿದೆ. ‘ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಎಲ್ಲಾ ರೀತಿ ಸಾಧ್ಯತೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
‘ಮುಂಬೈನಿಂದ ಬುಧವಾರ ಮಧ್ಯರಾ‌ತ್ರಿ ಬಂದೆ. ‍ ‍ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಲ್ಲಿನ ಸರ್ಕಾರ ನಡೆದುಕೊಂಡ ರೀತಿ ಅಮಾನವೀಯ. ಅಧಿಕೃತ ಪ್ರವಾಸ ಹೋಗಿದ್ದೇನೆ. ಅದನ್ನು ಅಲ್ಲಿನ ಸರ್ಕಾರಕ್ಕೂ ತಿಳಿಸಿದ್ದೆ. ಹೀಗಿದ್ದೂ ಅವರು ನನಗೆ ಹೋಟೆಲ್ ಪ್ರವೇಶಿಸದಂತೆ ತಡೆದರು. ಈ ಬಗ್ಗೆ ನಾನು ಹೋಟೆಲ್‌ ವಿರುದ್ಧ ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.
‘ಅತೃಪ್ತ ಶಾಸಕರು ನನ್ನನ್ನು ವಿಧಾನಸೌಧದಲ್ಲಿಯೇ ಭೇಟಿಯಾಗಲಿ. ಗುಟ್ಟಾಗಿ ಮಾತನಾಡಲು ಅವರೇನು ವ್ಯಾಪಾರ ಮಾತನಾಡಲು ಬರುತ್ತಿಲ್ಲವಲ್ಲ. ಸುರಕ್ಷಿತವಾಗಿ ಬರಲು ಅವರಿಗೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಸ್ಪೀಕರ್‌ ರಮೇಶ್‌ ಕುಮಾರ್ ತಿಳಿಸಿದರು.
‘ಯಾರು ಏನೇ ಹೇಳಿದರೂ ನಾನು ಕಾನೂನು ಹಾಗೂ ನಿಯಮಾವಳಿಗಳನ್ನು ಬಿಟ್ಟು ಒಂದು ಇಂಚು ಪಕ್ಕಕ್ಕೆ ಜರುಗುವುದಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿಗಾಗಿ ನಾನೂ ಕಾಯುತ್ತಿದ್ದೇನೆ. ಅಧಿವೇಶನ ಮುಂದೂಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂದು ಅಧಿವೇಶನ ನಡೆಯುತ್ತದೆ’ ಎಂದು ಸ್ಪಷ್ಟಪಡಿಸಿದರು.
‘ರಮೇಶ್‌ ಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಶಾಸಕರ ಮೇಲಿನ ಹಲ್ಲೆಯನ್ನು ಜನ ನೋಡಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸ್ಪೀಕರ್‌ ಪಕ್ಷದ ಕಾರ್ಯಕರ್ತರ ತರ ನಡೆದುಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯಗೆ ಆಪ್ತರು ಎಂಬ ಆರೋಪಕ್ಕೆ ಟ್ವೀಟ್‌ನಲ್ಲಿ ಉತ್ತರಿಸಿದ ಅವರು ಎಲ್ಲಾ ಶಾಸಕರು ನನಗೆ ಆಪ್ತರೇ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!