ಅಲೆವೂರು ಗುಡ್ಡೆ ಅಂಗಡಿಯಲ್ಲಿ “ಕೆಸರ್ಡ್ ಒಂಜಿ ದಿನ”
ಉಡುಪಿ: ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಕೃಷಿಯ ಅರಿವಿರದ ಸಮಯದಲ್ಲಿ ಅಲೆವೂರಿನ ಗಣೇಶೋತ್ಸವ ಸಮಿತಿ ಕಳೆದ ಹದಿಮೂರು ವರ್ಷಗಳಿಂದ ಕೆಸರ್ಡ ಒಂಜಿ ದಿನ ಕಾರ್ಯಕ್ರಮ ಹಮ್ಮಿಕೊಂಡು ಯುವಜನರಿಗೆ ಮಾಹಿತಿ ನೀಡುವ ಕೆಲಸಮಾಡುತ್ತಿದೆ. ಗ್ರಾಮೀಣ ಕ್ರೀಡೆಗಳು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳನ್ನು ಮತ್ತೆ ಮುನ್ನಾಲೆಗೆ ತರಲು ಇಂತಹ ಗ್ರಾಮೀಣ ಕ್ರೀಡಾಕೂಟಗಳು ಅತ್ಯವಶ್ಯಕ.
ಅಲೆವೂರಿನಲ್ಲಿ ನಡೆದ ಕೆಸರ್ಡ ಒಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷ ದಿನಕರ ಬಾಬು, ಯುವ ಜನತೆಯನ್ನು ಕೃಷಿಯ ಕಡೆಗೆ ಸೆಳೆಯುವುದರ ಜತೆಗೆ ಅವರಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳ ಪರಿಚಯ ಮಾಡಬೇಕು. ಇದು ಕೇವಲ ಮೋಜಿಗಾಗಿ ನಡೆಯದೆ ಇದರ ಅನುಭವವನ್ನು ಅವರೆಲ್ಲ ಪಡೆಯಬೇಕು. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಇಂತಹ ಕ್ರೀಡೋತ್ಸವ ಹೆಚ್ಚೆಚ್ಚು ನಡೆಯಬೇಕು ಎಂದು ಹೇಳಿದರು.
ಅಲೆವೂರು ಗುಡ್ಡೆ ಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಯುವಜನ ಸೇವೆ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಉಡುಪಿ ಜಿಲ್ಲಾ ಪಂಚಾಯ್ತಿಯ ಸಂಯುಕ್ತ ಆಶ್ರಯದಲ್ಲಿ ಅಲೆವೂರು ಜೋಡುರಸ್ತೆಯ ದೊಡ್ಡಮನೆ ಗದ್ದೆಯಲ್ಲಿ ಆಯೋಜಿಸಲಾದ ಕೆಸರ್ಡ್ ಒಂಜಿ ದಿನ ಗ್ರಾಮೀಣ ಕ್ರೀಡೋತ್ಸವ.