ಕಂಡದ ಮಣ್ಣ್ ದಾ ಕಮ್ಮನೆಗ್ ಮನ ಸೋತೆರ್ ಕಡೆಕಾರ್ದಾ ಜನಕುಲು…
ಉಡುಪಿ : 35 ವರ್ಷಗಳ ಇತಿಹಾಸ ಹೊಂದಿರುವ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಷ್ಠಿತ ಸಂಸ್ಥೆ ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಲೆ ಸಾಹಿತ್ಯ ಸಮಾಜ ಸೇವೆಯಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಾ ಬಂದಿದೆ.
ಜನರ ಪ್ರೀತಿ ವಿಶ್ವಾಸ ಗಳಿಸಿದಂತಹ ಈ ಸಂಸ್ಥೆಯು, ನಿನ್ನೆ ಕೃಷಿ ಗದ್ದೆಗೆ ಇಳಿದು ಕೆಸರನ್ನು ಚಿಮ್ಮಿಸುತ್ತಾ ಮನರಂಜನೆ ನೀಡುವಂತಹ ” ಕಡೆಕಾರ್ಡ್ ಕೆಸರ್ದ ಗೊಬ್ಬು” ಗ್ರಾಮೀಣ ಕ್ರೀಡಾಕೂಟ ನಡೆಸಿತು.
ಜಾತಿ ಮತ ಭೇದವಿಲ್ಲದೆ ಹಿರಿಯ ಕಿರಿಯ ಇದೆಲ್ಲವನ್ನೂ ಮರೆತು, ಮಕ್ಕಳು ಯುವಜನರು ಹಿರಿಯರು ಎಲ್ಲರೂ ಭಾಗವಹಿಸುತ್ತಾರೆ. ಕೆಸರನ್ನು ಚಿಮ್ಮಿಸುತ್ತಾ ಗುರಿಯನ್ನು ತಲುಪಲು ಎದ್ದು ಬಿದ್ದು ಓಡುತ್ತಾರೆ. ಕೆಲವರು ಗುರಿ ತಲುಪುತ್ತಾರೆ ಕೆಲವರು ಅರ್ಧದಲ್ಲೇ ತಿರುಗಿ ಬರುತ್ತಾರೆ. ಚಿಕ್ಕಮಕ್ಕಳು ಕೆಸರನ್ನು ಮೈಗೆ ಎರಚುತ್ತಾ ಸಂಭ್ರಮ ಪಡುವ ರೀತಿ ನಿಜಕ್ಕೂ ರೋಮಾಂಚನವಾಗುತ್ತದೆ.
ತಂತ್ರಜ್ಞಾನದ ಯುಗದಲ್ಲಿ ಜಾನಪದ ಕ್ರೀಡೆಗಳಿಂದ ದೂರ ಸರಿಯುತ್ತಿರುವ ಯುವಜನರಿಗೆ ಕಡೆಕಾರು ಕರಾವಳಿ ಸ್ಪೋರ್ಟ್ಸ್ ಕ್ಲಬ್ ಇವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಡೆಕಾರ್ಡ್ ಕೆಸರ್ದ ಗೊಬ್ಬು ಸಂಭ್ರಮದಿಂದ ನಡೆಯಿತು. ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ , ಮಾನವ ಗೋಪುರ, ದೋಣಿ ಆಟ, ರಿಲೇ, ಹಿಮ್ಮುಖ ಓಟ, ತೆಂಗಿನಕಾಯಿ ಎಸೆತ, ಮಡಕೆ ಹೊಡೆತ, ನಿಧಿ ಶೋಧ ಮತ್ತಿತರ ಸ್ಪರ್ಧೆಗಳು ಕ್ರೀಡಾಕೂಟ ವೀಕ್ಷಿಸುವವರನ್ನು ಮನರಂಜಿಸಿತು.
ಕಡೆಕಾರು ಧೂಮಾವತಿ ಗಡು ವಾಡಿನಿಂದ ಕ್ರೀಡಾಕೂಟದ ಮೆರವಣಿಗೆಗೆ ದಿಶಾ ಮಾರ್ಕೆಟಿಂಗ್ ಮಾಲಕ ಸುದರ್ಶನ್ ಎಚ್, ನಿಡಂಬೂರು ಯುವಕ ಮಂಡಲದ ಅಧ್ಯಕ್ಷ ಶ್ರೀನಿವಾಸ ಹೆಗ್ಡೆ, ಗುರಿಕಾರ ರಾಮಪ್ಪ ಚಾಲನೆ ನೀಡಿದರು. ಮೆರವಣಿಗೆಯ ಉದ್ದಕ್ಕೂ ಸಾರ್ವಜನಿಕರು ಮೆರವಣಿಗೆಗೆ ಉತ್ಸಾಹದಿಂದ ವೀಕ್ಷಿಸಿದರು. ಮೆರವಣಿಗೆಯಲ್ಲಿ ಚೆಂಡೆ, ಕೊಂಬು, ಕಹಳೆ, ಬ್ಯಾಂಡ್ ವಾದ್ಯ ಶಬ್ದ ಮೆರವಣಿಗೆಯಲ್ಲಿ ಇದ್ದವರನ್ನು ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳಲು ಪ್ರೇರೇಪಣೆ ನೀಡುತಿತ್ತು.
ಅದರಲ್ಲೂ ಕಂಬಳದ ಕೋಣಗಳು ಮತ್ತು ನೇಜಿಯನ್ನು ಹಿಡಿದುಕೊಂಡ ಯುವತಿಯರು ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಜ್ವಲ್ ಡೆವಲಪರ್ಸ್ನ ಮಾಲಕರಾದ ಪುರುಷೋತ್ತಮ ಪಿ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಗೋಪಾಲ ಸಿ ಬಂಗೇರ ವಹಿಸಿ, ಸಂಘಟನೆಯ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಲಯನ್ಸ್ ಜಿಲ್ಲಾ ಸಂಪರ್ಕಾಧಿಕಾರಿ ಸಂಜೀವ ಟಿ ಕರ್ಕೇರಾ ನಮ್ಮ ಹಿಂದಿನ ಆಚರಣೆ ಸಂಸ್ಕೃತಿಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ಅತಿಥಿಗಳು ಗದ್ದೆಗೆ ಹಾಲೆರೆದು ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಿಂಧೂ ರಾಮ್ ಆನಂದ ಪುತ್ರನ್, ಗ್ರಾಮದ ಹಿರಿಯ ಶ್ರಮಜೀವಿಗಳಾದ ಯಮುನಾ ಆರ್ ಸಾಲ್ಯಾನ್ , ಪ್ರಭಾಕರ ಶೆಟ್ಟಿ, ಜಗನ್ನಾಥ ಪೂಜಾರಿ, ಅಮ್ಮಣ್ಣಿ ಆಚಾರ್ತಿ, ಜಯಕರ ಅಮೀನ್, ಗಿರಿಜಾ, ದೇವು ಅಮೀನ್, ಗಣೇಶ್ ಪೂಜಾರಿ, ಸುಶೀಲಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ರಘುನಾಥ ಕೋಟ್ಯಾನ್ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್, ಉದ್ಯಮಿ ಹರೀಶ್ ಕುಮಾರ್ ಸೌಂದರ್ಯ ಸಹಿತ ವಿವಿಧ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು ಕಾರ್ಯದರ್ಶಿ ಸುರೇಶ್ ಮೆಂಡನ್ ಸ್ವಾಗತಿಸಿದರೆ, ಕೋಶಾಧಿಕಾರಿ ಪ್ರವೀಣ್ ಕುಮಾರ್ ವಂದಿಸಿದರು. ವಿಜೇತ ಶೆಟ್ಟಿ , ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು ಇದರ ಗೌರವಾಧ್ಯಕ್ಷರಾದ ಮುರಳೀಧರ ಶೆಟ್ಟಿ, ಅಧ್ಯಕ್ಷರಾದ ದಿನೇಶ್ ಜೆ. ಕಾರ್ಯದರ್ಶಿ ಶಶಿಧರ ಬಂಗೇರ ಮತ್ತು ಗ್ರಾಮೀಣ ಕ್ರೀಡಾಕೂಟದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಎರ್ಮಾಳು, ಅಧ್ಯಕ್ಷ ತಾರಾನಾಥ ಆರ್ ಸುವರ್ಣ, ಪ್ರಧಾನ ಸಂಚಾಲಕರಾದ ಸೋಮನಾಥ ಕೆ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜತಿನ್ ಕಡೆಕಾರು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಸಹಿತ ವಿವಿಧ ಸಮಿತಿಗಳ ಸದಸ್ಯರು ಕಡೆಕಾರು ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು.