ಕಡಿಯಾಳಿ ದೇವಸ್ಥಾನ: ಕೊಡಿಮರದ ವೈಭವದ ಮೆರವಣಿಗೆ
ಉಡುಪಿ:ಕಡಿಯಾಳಿ ಶ್ರೀ ಮಹಿಷರ್ಮದಿನಿ ದೇವಸ್ಥಾನದ ಧ್ವಜ ಸ್ಥಂಭಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಿಂದ ತಂದಿರುವ ಕೊಡಿಮರ (ಸಾಗುವಾನಿ)ದ ಮೆರವಣಿಗೆ ಶುಕ್ರವಾರ ವೈಭವದಿಂದ ನಡೆಯಿತು. ಕೊಂಬು, ಕಹಳೆ, ಹುಲಿವೇಷ, ತಟ್ಟಿರಾಯ, ಪೂರ್ಣಕುಂಭ ಮೆರವಣಿಗೆ, ಕೀಲು ಕುದುರೆ ಕೊಡಿಮರ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು. ನೂರಾರು ಸಂಖ್ಯೆಯ ಭಕ್ತಾಗಳು ಈ ಮೆರವಣಿಗೆಯ
ವೈಭವವನ್ನು ಕಣ್ತುಂಬಿಕೊಂಡರು. ಸುಮಾರು 80 ಅಡಿ ಉದ್ದದ ಸಾಗುವಾನಿ ಮರವನ್ನು ಬೃಹತ್ ಲಾರಿಯಲ್ಲಿಟ್ಟು ಭಕ್ತಿಭಾವದಿಂದ ದೇವಳಕ್ಕೆ ತರಲಾಯಿತು.
ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಮಾಧವ ಬನ್ನಂಜೆ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಕೊಡಿಮರವನ್ನು ಜೀರ್ಣೋದ್ಧಾರ ಸಮಿತಿ ಸದಸ್ಯ ಹಾಗೂ ಉದ್ಯಮಿಗಳಾದ ಸುಭಾಶ್ಚಂದ್ರ ಹೆಗ್ಡೆ ಮತ್ತು ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ್ದು, ಬನ್ನಂಜೆ ದೇವಸ್ಥಾನದಿಂದ ಶಿರಿಬೀಡು, ಸಿಟಿ ಬಸ್‌ನಿಲ್ದಾಣ, ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ದೇವಳಕ್ಕೆ ಮೆರವಣಿಗೆ ಸಾಗಿ ಬಂತು.
ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಕೆ. ರಘುಪತಿ ಭಟ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ್ ಹೆಬ್ಬಾರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ವಿಜಯೇಂದ್ರ ವಸಂತ್, ನಗರಸಭೆ ಸದಸ್ಯೆ ಗೀತಾ ಶೇಟ್, ಆಡಳಿತ ಮಂಡಳಿ ಕೆ.ಶ್ರೀಶ ಉಪಾಧ್ಯ, ಬಿ. ಜಯಕರ ಶೆಟ್ಟಿ ಇಂದ್ರಾಳಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.