ಕೃಷ್ಣನ ತತ್ವ ಶಾಸ್ತ್ರದಂತೆ ಮುನ್ನಡೆಯುವೆ: ಈಶಪ್ರಿಯ ಶ್ರೀ

ಮುಂಬಯಿ: ಚಿಂತನಾಶೀಲತೆ, ಮಹಾಪ್ರಯತ್ನ, ಶುದ್ಧಮನಸ್ಸಿನಿಂದ ಮಾಡಿದ ಕಾರ್ಯಗಳು ಯಾವೊತ್ತೂ ಫಲಕಾರಿಯಾಗಿ ಸಿದ್ಧಿಗೊಳ್ಳುವುದು. ಮನುಕುಲದ ಪ್ರಸಕ್ತ ಜೀವನಕ್ಕೆ ಯೋಗ್ಯತೆ, ಕ್ರೀಯಾಶೀಲತೆ ಜೊತೆಗೆ, ಉಪಾಯಗಾರಿಕೆ, ಮಂತ್ರದೊಟ್ಟಿಗೆ ತಂತ್ರಗಾರಿಕೆಯೂ ಅಗತ್ಯವಿದೆ. ಇವಕ್ಕೆಲ್ಲಕ್ಕೂ ಶ್ರೀಹರಿಯ ಅನುಗ್ರಹ ಪೂರಕವಾಗಿರಲೇ ಬೇಕು. ಆದರೆ ಭಗವಂತನ ಅನುಗ್ರಹ ಬಹಳ ಕಷ್ಟದ ಕೆಲಸ. ಇಂತಹ ಅನುಗ್ರಹಕ್ಕಾಗಿ ಮನುಷ್ಯನ ಶತಪ್ರಯತ್ನವೂ ಅಷ್ಟೇ ಅವಶ್ಯ. ಇದನ್ನು ಉಪಾಸನೆ, ಸಾಧುಸಂತರು, ಗುರುಗಳ ಮೂಲಕ ಸುಲಭ, ಸರಳವಾಗಿ ಸಿದ್ಧಿಸಲು ಸಾಧ್ಯವಾಗುವುದು. ಇದು ಒತ್ತಡದ ಬದುಕಿನ ಯುಗವಾಗಿದ್ದು ಮನುಜರು ಮಾನಸಿಕವಾಗಿ ಸದೃಢರಾಗಿದ್ದು ತಾಳ್ಮೆಯನ್ನು ರೂಢಿಸಿ ಕ್ಷಮಾಚನಾ ಗುಣ ಮೈಗೂಡಿಸಿ ಕೊಂಡಾಗಲೇ ಸಾಧ್ಯ. ಕ್ಷಮಾಸ್ತ್ರದಿಂದ ಲೋಕದ ಗೆಲುವು ಸಾಧ್ಯ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಜನವರಿ 2020 ರಲ್ಲಿ ಅದಮಾರು ಮಠದ 32 ನೇ ಆವೃತ್ತಿಯ ಉಡುಪಿ ಪರ್ಯಯ ಪಟ್ಟಾಧೀಶ ದೀಕ್ಷೆ ಸ್ವೀಕಾರಿಸಲಿರುವ ಈಶ ಪ್ರಿಯತೀರ್ಥರು ಪರ್ಯಾಯ ಪೂರ್ವ ಸಂಚಾರವಾಗಿಸಿ ಇಂದಿಲ್ಲಿ ಬುಧವಾರ ಸಂಜೆ ಬೃಹನ್ಮುಂಬಯಿಗೆ ಚರಣಸ್ಪರ್ಶಗೈದು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಮುಂಬಯಿ ಭಕ್ತಸಮೂಹದ ಗೌರವ ಸ್ವೀಕಾರಿಸಿ ನೆರೆದ ಭಕ್ತರಿಗೆ ಮಂತ್ರಾಕ್ಷತೆವಿತ್ತು ಆಶೀರ್ವಚನಗೈದರು.

ಅದಮಾರು ಮಠಾಧೀಶ 108 ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅಪ್ಪಣೆ, ಅನುಗ್ರಹಗಳೊಂದಿಗೆ ಶ್ರೀ ಕೃಷ್ಣ ದೇವರ ಆರಾಧನೆ, ಮಠದ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಶ್ರೀ ಮಾಧ್ವಾಚಾರ್ಯರು ಸ್ಥಾಪಿತ ಅಷ್ಟಮಠಗಳಲ್ಲಿನ ಶ್ರೀ ಅದಮಾರು ಮಠದ ಶ್ರೀ ನರಸಿಂಹತೀರ್ಥರ ಹಾದಿಯಲ್ಲೇ ಶ್ರೀ ಕೃಷ್ಣ ಮತ್ತು ಅವರ ತತ್ತ್ವಶಾಸ್ತ್ರದಂತೆ ಮುನ್ನಡೆಯಲು ಸನ್ನದ್ಧನಾಗಿರುವೆ. ನಮ್ಮ ಪರ್ಯಾಯದಲ್ಲಿ ಪ್ರಥಮತಃ ಭಗವದ್ಭಕ್ತರಿಗೆ ಶ್ರೀಕೃಷ್ಣನ ದರ್ಶನ ಮಾಡಿಸಿ, ಎಲ್ಲರಲ್ಲೂ ಸದ್ಭಕ್ತಿ ಮೂಡಿಸುವುದೇ ನಮ್ಮ ಯೋಚನೆ ಮತ್ತು ಯೋಜನೆಯೂ ಆಗಿದೆ. ತನ್ನ ಪರ್ಯಾಯದ ಅಧಿಕಾರಾವಧಿ ಸುಗಮವಾಗಿ ನಡೆಸಲು ತಮ್ಮಂತಹ ಭಕ್ತಾಭಿಮಾನಿಗಳ ಶುಭಾರೈಗಳನ್ನು ಆಸಿಸುವೆ ಎಂದು ತನ್ನ ಪರ್ಯಾಯ ಪೂರ್ವ ಸಂಚಾರದಲ್ಲಿ ನೆರೆದ ಭಕ್ತವೃಂದವನ್ನು ಈಶ ಪ್ರಿಯತೀರ್ಥರು ಕೋರಿದರು.

ಪರ್ಯಾಯ ಪೂರ್ವ ಸಂಚಾರ ಸ್ವಾಗತ ಸಮಿತಿಯ ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಶ್ರೀ ಮದ್ಭ್ಭಾರತ ಮಂಡಳಿ ಮುಂಬಯಿ ಅಧ್ಯಕ್ಷ ಜಗನ್ನಾಥ್ ಪುತ್ರನ್, ಮಧ್ವ ಮಹಾ ಮಂಡಲ, ಮುಂಬಯಿ ಅಧ್ಯಕ್ಷ ಡಾ| ಎ.ಎಸ್ ರಾವ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಮುಂಬಯಿ ಕಾರ್ಯಧ್ಯಕ್ಷ ಎನ್.ಹೆಚ್ ಕುಸ್ನೂರು ವೇದಿಕೆಯಲ್ಲಿ ಆಸೀನರಾಗಿದ್ದರು.

Leave a Reply

Your email address will not be published. Required fields are marked *

error: Content is protected !!