ಜುಲೈ 21 : ಸಂಗಮ ಸಾಂಸ್ಕೃತಿಕ ವೇದಿಕೆ “ಕೆಸರ್ಡ್ ಗೊಬ್ಬು-2019”

 ಉಡುಪಿ: ಯುವಜನತೆ ಕೃಷಿಯಿಂದ ದೂರ ಸರಿಯುತ್ತಿರುವ ಇತ್ತೀಚಿನ ದಿನಗಳಲ್ಲಿ, ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಮತ್ತು ವಿಶೇಷವಾಗಿ ಆಧುನಿಕ ಕಾಲದ ಯುವ ಜನತೆಯನ್ನು ಗ್ರಾಮೀಣ ಕ್ರೀಡಾ
ಕೂಟಕ್ಕೆ ಆಕರ್ಷಿಸುವ ಸಲುವಾಗಿ  ಉದ್ಯಾವರ ಕುತ್ಪಾಡಿಯ ಸಂಗಮ ಸಾಂಸ್ಕೃತಿಕ ವೇದಿಕೆ (ರಿ) “ಕೆಸರ್ಡ್ ಗೊಬ್ಬು”  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
12 ನೆ ವರ್ಷದ ಸಂಭ್ರಮದಲ್ಲಿರುವ ಸಂಗಮ ಸಾಂಸ್ಕೃತಿಕ ವೇದಿಕೆ, ವಿದ್ಯೆ, ಸಂಸ್ಕೃತಿ ಮತ್ತು ಸಂಘಟನೆಗೆ ವಿಶೇಷವಾದ ಒತ್ತನ್ನು ನೀಡುತ್ತಿದೆ. ಉದ್ಯಾವರ ಕುತ್ಪಾಡಿ ಪರಿಸರದಲ್ಲಿ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಸಂಸ್ಥೆಯ ಹನ್ನೊಂದು ವರ್ಷಗಳ ಇತಿಹಾಸದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಕೆಸರ್ಡ್ ಗೊಬ್ಬು ಕ್ರೀಡಾಕೂಟವನ್ನು ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹಮ್ಮಿಕೊಂಡಿತ್ತು. ಕಳೆದ ವರ್ಷ ಸಾರ್ವಜನಿಕರು ನೀಡಿದ ಭಾರಿ ಪ್ರೋತ್ಸಾಹದಿಂದ ಸತತ ದ್ವಿತೀಯ ವರ್ಷ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ.
ಕುತ್ಪಾಡಿ ಶಾಲಾ ಬಳಿಯ ಹಿರಿಯ ಕೃಷಿಕ ಕುಟುಂಬ ದಾಂತಿ ಕುಟುಂಬಸ್ಥರ ಗದ್ದೆಯಲ್ಲಿ ಆದಿತ್ಯವಾರ ಜುಲೈ 21 ಬೆಳಗ್ಗೆ “ಕೆಸರ್ಡ್ ಗೊಬ್ಬು” ಕ್ರೀಡಾಕೂಟ ಉದ್ಘಾಟನೆಯಾಗಲಿದೆ. ಸಂಗಮ ಸಾಂಸ್ಕೃತಿಕ ವೇದಿಕೆ (ರಿ) ಇವರ ನೇತೃತ್ವದಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಈ ಕ್ರೀಡಾಕೂಟ ಜರುಗಲಿದೆ. ಸ್ಥಳೀಯ ಶಾಸಕರುಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ವಿವಿಧ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, ಮಾನವ ಗೋಪುರ, ಮೂರು ಕಾಲಿನ ಓಟ, ಮಹಿಳೆಯರ ವಿಭಾಗದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್, ಹಾಳೆಗರಿ ಓಟ, ಗಿಡ ಓಟ, ಜೋಡು ಸೇರು ಸ್ಪರ್ಧೆಗಳು ಗುಂಪು ವಿಭಾಗದಲ್ಲಿ ನಡೆಯಲಿದೆ. ಮಕ್ಕಳ ವಿಭಾಗದಲ್ಲಿ ಗಿಡ ಓಟ, ಹಿಂಬದಿ ಓಟ, ಮೂರು ಕಾಲಿನ ಓಟ ಸಹಿತ ಮಡಕೆ ಒಡೆತ, ನಿಧಿ ಶೋಧ, ಹಿಂಬದಿ ಓಟ ಸ್ಪರ್ಧೆಗಳು ಜರುಗಲಿವೆ ಎಂದು ಸಂಘಟಕರು ತಿಳಿಸಿದ್ದಾರೆ. ವಿಜೇತ ತಂಡಗಳಿಗೆ ಶಾಶ್ವತ ಫಲಕದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಮಾತ್ರವಲ್ಲದೆ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಗಂಜಿ ಊಟದ ವ್ಯವಸ್ಥೆ ಮಾಡಲಾಗಿದೆ ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಒದಗಿಸಲಾಗಿದೆ. ಉದ್ಘಾಟನಾ ಸಮಾರಂಭದ ಬಳಿಕ ಕೆಸರು ಗದ್ದೆಯಲ್ಲಿ ಆಕರ್ಷಕ ನೃತ್ಯ ಕಾರ್ಯಕ್ರಮ ಜರುಗಲಿವುದು ಎಂದು ಗೌರವ ಅಧ್ಯಕ್ಷ ಗಣೇಶ್ ಕುಮಾರ್ ಮತ್ತು ಅಧ್ಯಕ್ಷ ಮಾಧವ ಅಮೀನ್ ತಿಳಿಸಿದ್ದಾರೆ.
ಸಂಗಮ ಸಾಂಸ್ಕೃತಿಕ ವೇದಿಕೆ (ರಿ) ಸಂಸ್ಥೆಯು ಉದ್ಯಾವರ ಕುತ್ಪಾಡಿ ಪರಿಸರದಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸುತ್ತಿದೆ. ಹಲವಾರು ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶವನ್ನು ಮಾಡಿಕೊಟ್ಟಿದೆ. ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರು, ಸ್ಥಾಪಕ ಅಧ್ಯಕ್ಷರಾದ ಗಣೇಶ್ ಕುಮಾರ್ ನೇತೃತ್ವದಲ್ಲಿ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು ಜನರ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ.
ಕುತ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಬರಲು ಕಾರಣರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಶಾಲಾ ಮಕ್ಕಳಿಗೆ ಪರಿಕರ ವಿತರಣೆ, ಪುಸ್ತಕ ವಿತರಣೆ, ರಕ್ತದಾನ, ವನಮಹೋತ್ಸವ, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಡ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಬಡ ಹೆಣ್ಣುಮಕ್ಕಳಿಗೆ ವಿವಾಹವಾಗಲು ಸಹಾಯಧನವನ್ನು ಸಂಸ್ಥೆ ನೀಡಿದೆ. ಕುತ್ಪಾಡಿ ಪರಿಸರದ ಒಂದು ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಲಾಗಿದೆ. ಸಂಘಟನೆಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಹಗ್ಗಜಗ್ಗಾಟ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಿದೆ. ಜಿಲ್ಲೆಯ ಪ್ರಮುಖ ನಾಟಕ ತಂಡಗಳನ್ನು ಗುರುತಿಸಿ ದಶಮಾನೋತ್ಸವದ ಪ್ರಯುಕ್ತ ಒಂದು ವಾರ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು ಮಾತ್ರವಲ್ಲದೆ ಉದ್ಯಾವರದ ವಿವಿಧ ಕಾರ್ಯಕ್ರಮಗಳಲ್ಲಿ ಕೂಡ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!