ಜೋಮ್ಲು ತೀರ್ಥ: ಯುವಕ ನೀರುಪಾಲು
ಕಾರ್ಕಳ : ತನ್ನ ಕುಟುಂಬ ಸದಸ್ಯರೊಂದಿಗೆ ದೀಪಾವಳಿಯ ರಜೆ ಕಳೆಯಲೆಂದು ಊರಿಗೆ ಬಂದಿದ್ದ ಯುವಕನೋರ್ವ ಹೆಬ್ರಿ ಸಮೀಪದ ಜೋಮ್ಲುತೀರ್ಥ ಜಲಪಾತದಲ್ಲಿ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಬ್ರಹ್ಮಾವರ ತಾಲೂಕಿನ ಕಾಡೂರು ಶೇಖರ್ ಶೆಟ್ಟಿ ಎಂಬವರ ಮಗ ಸಚಿನ್ ಶೆಟ್ಟಿ (24) ಜೋಮ್ಲುತೀರ್ಥ ಜಲಪಾತದಲ್ಲಿ ಈಜಲು ಹೋಗಿ ನೀರುಪಾಲಾದ ದುರ್ದೈವಿ.
ಸಚಿನ್ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಕಳೆಯಲೆಂದು ಕಳೆದ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದರು. ಭಾನುವಾರ ಬೆಳಗ್ಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಜೋಮ್ಲುತೀರ್ಥಕ್ಕೆ ಬಂದಿದ್ದ. ಮಧ್ಯಾಹ್ನದ ವೇಳೆ ನೀರಿನಲ್ಲಿ ಈಜಾಡಲೆಂದು ಹೋಗಿದ್ದ ಸಚಿನ್ ನೀರಿನ ತೀವೃ ಸೆಳೆತಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಕಳೆದ ೧ ವಾರದಿಂದ ಭಾರೀ ಮಳೆ ಹಿನ್ನೆಲೆಯಲ್ಲಿ ಹೆಬ್ರಿ ಸಂತೆಕಟ್ಟೆಯ ಜೋಮ್ಲುತೀರ್ಥದಲ್ಲಿ ಭಾರೀ ಪ್ರವಾಹವಿದ್ದ ಹಿನ್ನೆಲೆಯಲ್ಲಿ ಸಚಿನ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿ ನೀರುಪಾಲಾದ ಸಚಿನ್ ಶೆಟ್ಟಿ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ. ಆದರೆ ಕತ್ತಲಾಗುವವರೆಗೂ ಸಚಿನ್ ಶೆಟ್ಟಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆತ ಬದುಕಿರುವ ಬಗ್ಗೆ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ. ಸೀತಾನದಿಯ ಜೋಮ್ಲುತೀರ್ಥದಲ್ಲಿ ನೀರಿನ ಪ್ರವಾಹ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಪ್ರವಾಸಿಗರ ಪಾಲಿಗೆ ಅತ್ಯಂತ ಡೆಡ್ಲಿ ಪ್ರವಾಸಿ ತಾಣವಾಗಿರುವ ಜೋಮ್ಲುತೀರ್ಥ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸಿಗರು ನೀರುಪಾಲಾಗಿ ಮೃತಪಟ್ಟ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿಯೂ ಸಚಿನ್ ಶೆಟ್ಟಿ ಬದುಕಿತುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ಹೆಬ್ರಿ ಪೊಲೀಸರು ಈಗಾಗಲೇ ನಾಪತ್ತೆ ದೂರು ದಾಖಲಿಸಿಕೊಂಡು ಸಚಿನ್ ಶೆಟ್ಟಿ ಶೋಧಕ್ಕೆ ಕ್ರಮ ಕೈಗೊಂಡಿದ್ದಾರೆ