ಗೌರಿ ಮೆಮೋರಿಯಲ್ ಟ್ರಸ್ಟಿನ ಕಾರ್ಯದರ್ಶಿ ಬಂಧನ: ಬಿಡುಗಡೆಗೆ ಆಗ್ರಹ

ಗೌರಿ ಮೆಮೋರಿಯಲ್ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ,  ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಅ. 24 ರಂದು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಗೌರಿ ಲಂಕೇಶ್ ಪತ್ರಿಕೆಯ ವಾರಸುದಾರಿಕೆಯನ್ನು ಮುಂದುವರಿಸುವುದಕ್ಕಾಗಿ ಗೌರಿ ಮೀಡಿಯಾ ಟ್ರಸ್ಟ್ ಹೊರತರುತ್ತಿರುವ ನ್ಯಾಯಪಥ ಪತ್ರಿಕೆಯನ್ನು ರೂಪಿಸುವಲ್ಲಿಯೂ ಗಮನಾರ್ಹ ಕೆಲಸ ಮಾಡುತ್ತಿರುವ ನರಸಿಂಹಮೂರ್ತಿಯವರು ಈ ಪತ್ರಿಕೆಯನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ, ವ್ಯಾಪಕವಾಗಿಸುವುದಕ್ಕಾಗಿ ರಾಜ್ಯಾದ್ಯಂತ ಸುತ್ತಾಡಿ ಸಮಾನ ಮನಸ್ಕ ಗೆಳೆಯರ ಸಭೆಗಳನ್ನು ನಡೆಸುತ್ತಿದ್ದರು.

ಈ ಕೆಲಸದ ಭಾಗವಾಗಿ ಅವರು ಮೊನ್ನೆ ನಿನ್ನೆ ರಾಯಚೂರಿನಲ್ಲಿ ಒಂದು ಸಭೆ ನಡೆಸಿ ಮುಗಿಸುವ ಹೊತ್ತಿಗೆ ರಾಯಚೂರು ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇಂದು, ನವೆಂಬರ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನರಸಿಂಹ‌ ಮೂರ್ತಿಯವರ ಮೇಲೆ ಹೋರಿಸಲಾಗಿರುವ ಆರೋಪವು ತೀರಾ ವಿಚಿತ್ರವಾಗಿದೆ. 1991-2004 ರವರೆಗೆ ರಾಯಚೂರು ಜಿಲ್ಲೆಯಲ್ಲಿ ನಡೆದ ಕೆಲವು ಕೃತ್ಯಗಳಲ್ಲಿ ವಿನೋದ್ ಎಂಬ ವ್ಯಕ್ತಿಯು ಆರೋಪಿಯಾಗಿದ್ದು, ಆತನು ಪೋಲಿಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವನಂತೆ. ಆ ವ್ಯಕ್ತಿಯೇ, ನರಸಿಂಹ ಮೂರ್ತಿ ಎಂದು ರಾಯಚೂರಿನ‌ ಪೋಲಿಸರೊಬ್ಬರು ಗುರುತಿಸಿದ್ದರೆಂಬ ನೆಪದಲ್ಲಿ, ನರಸಿಂಹ ಮೂರ್ತಿನ್ನು ಬಂಧನಕ್ಕೆ ಒಳಪಡಿಸಿರುವರು.

ಹಾಗು ವಿನೋದ್ ಎಂಬುವವನ ಮೇಲೆ ಇರುವ ಬಹು ಗಂಭೀರ ಆರೋಪಗಳನ್ನು ನರಸಿಂಹ ಮೂರ್ತಿ ಮೇಲೆ ಹೋರಿಸಿದ್ದಾರೆ.  ನರಸಿಂಹ ಮೂರ್ತಿ ಬೆಂಗಳೂರಿನವರಾಗಿದ್ದು, ತಮ್ಮ ಕುಟುಂಬದ ವ್ಯಾಪಾರ-ವ್ಯವಹಾರಗಳಲ್ಲಿ ನಡೆಸಿಕೊಂಡು ಹೋಗುತ್ತಿರುವವರಾಗಿದ್ದಾರೆ.  ಸಾಮಾಜಿಕ ಕಾಳಜಿಯನ್ನು ಉಳ್ಳವರಾದ ಅವರು ೧೯೮೯ರಿಂದಲೂ ಬೆಂಗಳೂರಿನಲ್ಲಿ ಪ್ರಜಾಸತ್ತಾತ್ಮಕ ಜನಪರ ಚಳುವಳಿಗಳಲ್ಲಿ ಬಹಿರಂಗವಾಗಿ ಭಾಗವಹಿಸುತ್ತಿದ್ದಾರೆ. ಅಂತೆಯೇ, ಕರ್ನಾಟಕದಾದ್ಯಂತ ನಡೆಯುತ್ತಿರುವ ಜನಪರ ಒಕ್ಕೂಟಗಳ  ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ.

‘ಸ್ವರಾಜ್ಯ ಇಂಡಿಯಾ’ದ ರಾಜ್ಯ ಕಾರ್ಯದರ್ಶಿಯಾಗಿ, ಸಂಘಟನೆಯ ಬಹಿರಂಗ ಚಳುವಳಿ, ಸಮಾವೇಶ, ಪತ್ರಿಕಾಗೋಷ್ಟಿಗಳಲ್ಲಿ ನೇರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗೌರಿ ಮಿಡಿಯಾ ಟ್ರಸ್ಟ್’ನ ಸಕ್ರಿಯ ಭಾಗವಾಗಿ, ಅವರು  ಬೆಂಗಳೂರಿನ ಬೃಹತ್ತ್ ಸಾರ್ವಜನಿಕ ಸಭೆಗಳಲ್ಲಿ ವೇದಿಕೆಯಲ್ಲಿ ಭಾಗವಹಿಸಿ,  ಮಾತನಾಡಿದ್ದಾರೆ ಮತ್ತು ಅವು ದಿನಪತ್ರಿಕೆಗಳಲ್ಲಿ ವರದಿಯಾಗಿವೆ. ಅಂತೆಯೇ, ಪತ್ರಿಕೆಗಳಲ್ಲಿ ಅವರು ತಮ್ಮ ಫೋಟೋ ಸಹಿತ ಲೇಖನಗಳನ್ನು ಬರೆದಿದ್ದಾರೆ. ಪೋಲಿಸರಿಂದ ತಲೆಮರೆಸಿಕೊಳ್ಳುವ ವ್ಯಕ್ತಿಯು, ಹೀಗೆ ಬಹಿರಂಗದಲ್ಲಿ, ರಾಜ್ಯದ ಹಾಗು ರಾಜಧಾನಿಯ ಪೋಲಿಸು ವ್ಯವಸ್ಥೆಯ ಕಣ್ಣೆದುರೇ ಓಡಾಡಿಕೊಂಡು ಇರುತ್ತಾನೆಯೇ? ಇಷ್ಟು ವರ್ಷಗಳಲ್ಲಿ, ಸಾರ್ವಜನಿಕದಲ್ಲಿ ಎದ್ದು ಕಾಣಿಸುತ್ತಿದ್ದ ನರಸಿಂಹ ಮೂರ್ತಿಯ ಚಹರೆಯಲ್ಲಿ, ಪೋಲಿಸರಿಗೆ ವಿನೋದ್ ಎಂಬುವವನು ಚಹರೆ ಗುರುತೇ ಹತ್ತದೇ, ಹಠಾತ್ತ್ ಗುರುತು ಹತ್ತಿರುವುದು ತೀರಾ ಅನುಮಾನಸ್ಪದವಾಗಿದೆ.

ನರಸಿಂಹ ಮೂರ್ತಿ ಜನರ ಸಂಕಷ್ಟಗಳ ಪರವಾಗಿ ಹೋರಾಟ ಮಾಡುತ್ತಿರುವವರು ,ಆ ಸಂದರ್ಭ ಅವರು ಅಧಿಕಾರಸ್ಥರನ್ನು ನ್ಯಾಯಯುತವಾಗಿ ಟೀಕಿಸಲು ಹಿಂಜರಿದವರಲ್ಲ- ಈ ಬಗೆಯ ಪ್ರತಿರೋಧವು ಪ್ರಜಾಪ್ರಭುತ್ವದಲ್ಲಿ ಅಪರಾಧವಾದರೂ ಹೇಗಾಗುತ್ತದೆ ಶಾಂತಿಯುತ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಮುಂದಾಗಿ ತೊಡಗಿಕೊಂಡಿರುವ ನರಸಿಂಹ ಮೂರ್ತಿಯವರನ್ನು, ‘ತಲೆಮರೆಸಿ’ ಕೊಂಡ ವ್ಯಕ್ತಿ ಎಂದು ಆರೋಪ ಹೋರಿಸಿ ಬಂಧಿಸಿರುವುದರ ಹಿಂದೆ ಅಧಿಕಾರಸ್ಥರ ಅಸಂವಿಧಾನಿಕ ನಡೆ ಕಾಣುತ್ತಿದೆ.

ಈ ಮೂಲಕ, ಜನರಪರವಾದ ನ್ಯಾಯಯುತ ಹೋರಾಟಗಳನ್ನು ದಮನಿಸುವ, ಅಪಾಯಕಾರಿ ವಿಧಾನಗಳ ಮೂಲಕ ಪ್ರಜಾಸತ್ತಾತ್ಮಕ ಹೋರಾಟಗಾರರಲ್ಲಿ ಆತಂಕ ಹುಟ್ಟಿಸುವ  ಅನ್ಯಾಯವೂ ವಿಧಿತವಾಗುತ್ತಿದೆ.ಅಕ್ರಮವಾದ ಈ ಆರೋಪ ಹಾಗು ಬಂಧನವನ್ನು, ಎಲ್ಲ ಜನತಂತ್ರವಾದಿಗಳೂ ವಿರೋಧಿಸಬೇಕು. ನರಸಿಂಹ ಮೂರ್ತಿಯವರ ಬೇಷರತ್ತ್ ಬಿಡುಗಡೆಗೆ ಮಾಡಬೇಕೆಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಅಧ್ಯಕ್ಷ ಜಿ.ರಾಜಶೇಖರ್ ಒತ್ತಾಯಿಸಿದ್ದಾರೆ.


*_

Leave a Reply

Your email address will not be published. Required fields are marked *

error: Content is protected !!