ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯದಲ್ಲಿ ಹಲಸು ಮೇಳ
ಬಂಟ್ವಾಳ: ಬಡವರ ಹಣ್ಣು ಎಂದೇ ಖ್ಯಾತಿ ಪಡೆದ, ಯಾವುದೇ ರಾಸಾಯನಿಕದ ಬಳಕೆಯಿಲ್ಲದೇ ಬೆಳೆಸಲ್ಪಡುವ ರುಚಿಕರವಾದ ಹಣ್ಣು ಹಲಸು. ವಿವಿಧ ಪ್ರಯೋಗಕ್ಕೆ ಒಳಗಾಗಿ ಒಂದು ಪ್ರಮುಖ ಬೆಳೆಯೆಂದೇ ಗುರುತಿಸಲ್ಪಟ್ಟಿದೆ. ಇಂತಹ ಹಲಸನ್ನು ಆಧಾರವಾಗಿಟ್ಟು ಆಯೋಜಿಸಿದ ಹಲಸಿನ ಮೇಳದಿಂದಾಗಿ ಇಲ್ಲಿ ವಿಜ್ಞಾನದೊಂದಿಗೆ ಜೀವನ ವಿಜ್ಞಾನವನ್ನೂ ಬೋಧಿಸಿದಂತಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್ .ಹೇಳಿದ್ದಾರೆ.
ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಿದ ಹಲಸು ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಇದು ಹಲಸನ್ನು ಮೌಲ್ಯವರ್ಧಿತಗೊಳಿಸುವ ಪ್ರಯೋಗಾತ್ಮಕವಾದ ಕಾರ್ಯಕ್ರಮವಾದರೂ ಮುಂದೆ ಇದೊಂದು ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹೆಜ್ಜೆಯಾಗಿದೆ. ಆಧುನಿಕ ಕಾಲಕ್ಕೆ ಬೇಕಾದಂತೆ ಹಲಸು ತನ್ನ ಮೌಲ್ಯವರ್ಧಿಸಿಕೊಂಡು ಬೆಳೆಯುತ್ತಿರುವುದು ಶ್ಲಾಘನೀಯವಾಗಿದ್ದು, ಇದಕ್ಕೆ ಇಂತಹ ಹಲಸುಮೇಳಗಳು ಪೂರಕಕ್ತಿಯನ್ನು ಒದಗಿಸಿದೆ ಎಂದು ಹೇಳಿದರು.
ಅತಿಥಿಯಾಗಿದ್ದ ಪ್ರಗತಿಪರ ಕೃಷಿಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಸೇಡಿಯಾಪು ಜನಾರ್ಧನ ಭಟ್ ಅವರು ಮಾತನಾಡಿ ಹಲಸು ಕೇವಲ ಆಹಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಪೂರಕವಾದುದು ಹೋಮಾದಿಗಳಿಗೆ ಹಲಸಿನ ಚಕ್ಕೆ, ಎಲೆಯನ್ನು ಬಳಸಿ ತುಪ್ಪದೊಂದಿಗೆ ಬೆರೆಸಿ ಉಪಯೋಗಿಸಿದಾಗ ವಾತ ಮುಂತಾದ ರೋಗಗಳು ಗುಣವಾಗುತ್ತದೆ. ತರಕಾರಿಯಲ್ಲೂ ನಾವು ಕ್ರಾಂತಿಕಾರಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದೇವೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಉದ್ಯೋಗವನ್ನು ನಮ್ಮಲ್ಲೇ ಸೃಷ್ಟಿಸಿಕೊಂಡು ಬೆಳೆಯಬಹುದು ಎಂದು ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.