ಕುಶಾಲನಗರ  ಗುಂಡೂರಾವ್ ಬಡಾವಣೆ ನಿವೇಶನ : ಅರ್ಜಿಗಳನ್ನು ರದ್ದುಪಡಿಸಲು ಆಗ್ರಹ

ಮಡಿಕೇರಿ: ಕುಶಾಲನಗರದ  ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ   ಆನ್‌ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ನಿವೇಶನ ರಹಿತರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ಸ್ತ್ರೀಶಕ್ತಿ ಬ್ಲಾಕ್ ವಲಯ ಸೊಸೈಟಿ ಮತ್ತು ಮಾನವ ಹಕ್ಕು ಜನಜಾಗೃತಿ ವೇದಿಕೆ ಆಗ್ರಹಿಸಿದೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಟಿ.ಶ್ರೀನಿವಾಸ್ ಅವರು, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಕ್ಕೆ ಮನೆಗಳು ಇಲ್ಲದ ಹಾಗೂ ಮನೆಗಳಿದ್ದರೂ ವಾಸಕ್ಕೆ ಯೋಗ್ಯವಿಲ್ಲದ ಮನೆಗಳಲ್ಲಿ ನೂರಾರು ದಲಿತ ಕುಟುಂಬಗಳು ಸುಮಾರು ೫೦ ವರ್ಷಗಳಿಂದ ವಾಸವಾಗಿವೆ. ಕೆಲವರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಮತ್ತೆ ಕೆಲವರು ಕಳೆದ ಬಾರಿಯ ಪ್ರಕೃತಿ ವಿಕೋಪದ ಸಂದರ್ಭ ಬಿರುಕು ಬಿಟ್ಟು ಇಂದೋ ನಾಳೆಯೋ ಬೀಳುವ ಮನೆಗಳಲ್ಲಿದ್ದಾರೆ. ಅಂತಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ನೀಡುವುದು ಪಟ್ಟಣ ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ರಹಿತ ೧೫೦ ಕಡುಬಡವ ಕುಟುಂಬಗಳಿಗೆ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಲು ಜಾಗ ಕಾಯ್ದರಿಸಿ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದುವರೆಗೆ ಸುಮಾರು ೩೧೨ ಅರ್ಜಿಗಳು ಸಲ್ಲಿಕೆಯಾಗಿವೆ.  ಈ ರೀತಿ ಅರ್ಜಿ ಸಲ್ಲಿಸಿದವರಲ್ಲಿ ಕುಶಾಲನಗರದಿಂದ ಹೊರ ಭಾಗದಲ್ಲಿರುವವರು, ಹಾಸನ, ಮೈಸೂರು ಜಿಲ್ಲೆಗೆ ಸೇರಿದವರು ಹಾಗೂ ಈಗಾಗಲೇ ಸರಕಾರದ ನಿವೇಶನ ಪಡೆದು ಅದನ್ನು ಮಾರಾಟ ಮಾಡಿ ತೆರಳಿದವರು, ಕೆಲವು ಪ್ರಭಾವಿಗಳು, ಮನೆ ಆಸ್ತಿಪಾಸ್ತಿ ಹೊಂದಿರುವವರೂ ಸೇರಿದ್ದಾರೆ ಎಂದು ದೂರಿದರು.

ಪಟ್ಟಣ ಪಂಚಾಯಿತಿಯು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಸಂದರ್ಭ ಹೆಚ್ಚಿನ ಪ್ರಚಾರ ನೀಡದಿರುವುದರಿಂದ ಸ್ಥಳೀಯ ಬಡ, ಕೂಲಿ ಕಾರ್ಮಿಕ ಕುಟುಂಬಗಳು  ಮಾಹಿತಿ ಕೊರತೆಯಿಂದಾಗಿ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದೂ ಅವರು ಒತ್ತಾಯಿಸಿದರು.

 

ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡುವ ಸಂದರ್ಭ ೩೫ ಕುಟುಂಬಗಳ ಅರ್ಜಿಯನ್ನೂ ಪರಿಗಣಿಸುವಂತೆ ಕೋರಲಾಗಿದೆ. ಒಂದು ವೇಳೆ ನೈಜ ಫಲಾನುಭವಿಗಳಿಗೆ ಯಾವುದೇ ರೀತಿಯ ಅನ್ಯಾಯವಾದಲ್ಲಿ ವಿವಿಧ ಸಂಘಸಂಸ್ಥೆಗಳು, ಸ್ತ್ರೀಶಕ್ತಿ ಸಂಘಟನೆಗಳ ಸಹಕಾರದಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ  ಸ್ತ್ರೀಶಕ್ತಿ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ಎ.ಸಿ.ಕಮಲಾ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!