ಹಿರಿಯರ ತ್ಯಾಗಮಯ ಜೀವನವೇ ಸ್ಫೂರ್ತಿ : ಫಾ. ಮಹೇಶ್ ಡಿಸೋಜ

ಉಡುಪಿ : ಹಿರಿಯರು ನಮ್ಮ ಅತಿ ದೊಡ್ಡ ಆಸ್ತಿ. ಹಿರಿಯರ ತ್ಯಾಗಮಯ ಜೀವನವೇ ನಮಗೆ ಸ್ಫೂರ್ತಿ. ಹಿರಿಯರ ಬಳಿ ಬಹಳಷ್ಟು ಅನುಭವಗಳಿವೆ. ಅವರ ಅನುಭವಗಳನ್ನು ನಮ್ಮ ನೈಜ ಜೀವನದಲ್ಲಿ ಮತ್ತು ಕುಟುಂಬ ಜೀವನದಲ್ಲಿ ಉಪಯೋಗಿಸೋಣ ಎಂದು  ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ. ಮಹೇಶ್ ಡಿಸೋಜಾ ತಿಳಿಸಿದರು.

ಶಿರ್ವದ ಕಥೋಲಿಕ್ ಸಭಾ ಮತ್ತು ಕುಟುಂಬ ಆಯೋಗ ಪಿಲಾರು  ಘಟಕದ ನೇತೃತ್ವದಲ್ಲಿ ನಡೆದ ಹಿರಿಯರ ದಿನದ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿರಿಯರು ಕುಟುಂಬ ಜೀವನಕ್ಕಾಗಿ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ. ಅವರು ನಮ್ಮ ಮನೆಗಳಲ್ಲಿ ಇರುವುದೇ ನಮಗೆ ಆದರ್ಶ ಮತ್ತು ಆಕರ್ಷಣೆ. ಅವರನ್ನು ನೋಯಿಸದೆ ಇರೋಣ ಬದಲಾಗಿ ಅವರನ್ನು ಪ್ರೀತಿಸೋಣ ಮತ್ತು ಅವರ ಸಲಹೆಗಳನ್ನು ಸ್ವೀಕರಿಸಿ ನಮ್ಮ ಜೀವನವನ್ನು ಸಾಗಿಸೋಣ ಎಂದು ಫಾ. ಮಹೇಶ್ ಡಿಸೋಜಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ಏಸುವಿನ ದೇವಾಲಯ ಪಿಲಾರು ಇದರ ಧರ್ಮಗುರುಗಳು ಮತ್ತು ಕಥೋಲಿಕ್ ಸಭಾ ಘಟಕದ ನಿರ್ದೇಶಕರಾದ ವಂದನೀಯ ಫಾ. ವಿಶಾಲ್ ಲೋಬೋ ವಹಿಸಿದ್ದರು. ಘಟಕದ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಥೋಲಿಕ್ ಸಭಾ ಮತ್ತು ಕುಟುಂಬ ಆಯೋಗದ ಸದಸ್ಯರಿಂದ ಹಿರಿಯರಿಗೋಸ್ಕರ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಸಿದರು.

ಸಭಾ ಕಾರ್ಯಕ್ರಮದ ಮೊದಲು ಬಾಲ ಏಸುವಿನ ದೇವಾಲಯದಲ್ಲಿ ಫಾ.ಮಹೇಶ್ ಡಿಸೋಜ ರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಿಗೋಸ್ಕರ ವಿಶೇಷ ಪ್ರಾರ್ಥನಾ  ವಿಧಿಗಳು ನಡೆದವು.

ಕಥೋಲಿಕ್ ಸಭಾ ಪಿಲಾರು ಘಟಕದ ಅಧ್ಯಕ್ಷೆ ಪ್ರಿಯಾ ಡಿಸೋಜ, , ಕುಟುಂಬ ಆಯೋಗದ ಸಂಚಾಲಕಿ ಅನಿತಾ ಕೂರೆಯ, ಐಡಾ ಡಿಸೋಜಾ ಮತ್ತಿತರರು ಹಾಜರಿದ್ದರು. ದೇವಾಲಯದ ವ್ಯಾಪ್ತಿಯ 70ಕ್ಕೂ ಅಧಿಕ ಹಿರಿಯರು ಈ ಸಂಭ್ರಮದಲ್ಲಿ ಭಾಗಿಯಾದರು.

Leave a Reply

Your email address will not be published. Required fields are marked *

error: Content is protected !!