ಏಳದೆ ಮಂದಾರ ರಾಮಾಯಣ: ಸುಗಿಪು – ದುನಿಪು’ ಉದ್ಘಾಟನೆ
ಮಂಗಳೂರು: ‘ಮೂಲ ರಾಮಾಯಣದ ಕಥೆಯನ್ನೇ ಆಧರಿಸಿ ಮಂದಾರ ಕೇಶವ ಭಟ್ಟರು ರಾಮಾಯಣ ಬರೆದಿದ್ದರೂ ಸನ್ನಿವೇಶಗಳೆಲ್ಲವೂ ಮನಸ್ಸಿಗೆ ಮುಟ್ಟುವಂತೆ ಹಾಗೂ ಸುಲಭವಾಗಿ ಅರ್ಥವಾಗುವಂತೆ ಮಂದಾರ ರಾಮಾಯಣ ಮೂಡಿಬಂದಿದೆ. ಮೂಲತಹ ಕರಾಡ ಭಾಷಿಕರಾಗಿದ್ದರೂ ಅವರ ತುಳುವಿನ ಪ್ರೇಮ ಈ ಗ್ರಂಥದಲ್ಲಿ ಪ್ರಜ್ವಲಿಸುತ್ತಿದೆ. ತುಳುವಿನ ಭಾಷಾ ಪ್ರೌಢಿಮೆ ಶಬ್ದ ಭಂಡಾರಗಳು ಹಾಗೂ ತುಳುನಾಡಿನ ಆಚಾರ ವಿಚಾರ,ಪ್ರಕೃತಿ ಸೌಂದರ್ಯ ಈ ತುಳು ಮಹಾಕಾವ್ಯದಲ್ಲಿ ಎದ್ದು ತೋರುವುದರಿಂದ ಇದು ತುಳುನಾಡಿನ ಅಸ್ಮಿತೆಯನ್ನು ಸಾರುವ ಮೇರು ಕೃತಿ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ತುಳುವರ್ಲ್ಡ್ ಕುಡ್ಲ ಹಾಗೂ ತುಳುವೆರೆ ಕೂಟ ಶಕ್ತಿನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ ‘ಏಳದೆ ರಾಮಾಯಣ: ಸುಗಿಪು – ದುನಿಪು’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂದಾರ ಕೇಶವ ಭಟ್ಟರ ಕುರಿತು ಅವರು ಮಾತನಾಡಿದರು. ‘ಪ್ರತಿಯೊಂದು ಅಧ್ಯಾಯಕ್ಕೂ ತುಳುವಿನ ಸೂಕ್ತವಾದ ಶಿರೋನಾಮೆಯನ್ನು ನೀಡುವಲ್ಲಿ ಕೇಶವ ಭಟ್ಟರು ತನ್ನ ಸಾಹಿತ್ಯ ಪ್ರೌಢಿಮೆಯನ್ನು ತೋರಿಸಿದ್ದಾರೆ. ಇಂತಹ ಮಹಾನ್ ಗ್ರಂಥವು ಯಾವುದೇ ಭಾರತೀಯ ಮಹಾಕಾವ್ಯಗಳಿಗೆ ಕಡಿಮೆಯಲ್ಲ. ಮಂದಾರ ಕೇಶವ ಭಟ್ಟರ 101ನೇ ಜನ್ಮ ವರ್ಷದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜವಾಗಲೂ ಶ್ಲಾಘನೀಯ,’ ಎಂದವರು ಸಂಘಟಕರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ ಸಿ ಭಂಡಾರಿ ಉದ್ಘಾಟಿಸಿದರು. ತುಳುವೆರೆ ಆಯನ ಕೂಟ ಮಂಗಳೂರು ಇದರ ಗೌರವಾಧ್ಯಕ್ಷ ಡಾ. ಆರೂರು ಪ್ರಸಾದ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ತುಳುನಾಡು ಟ್ರಸ್ಟ್ ಇದರ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ವಾಚನ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಜಯಚಂದ್ರ ವರ್ಮಾ ರಾಜ ಮಾಯಿಪ್ಪಾಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರ, ಸಂಘಟಕ ನವನೀತ ಶೆಟ್ಟಿ ಕದ್ರಿ, ಮಂದಾರ ಶಾರದಾಮಣಿ, ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮುಲ್ಕಿ, ಬಿಕರ್ನಕಟ್ಟೆ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ತುಳುವೆರೆ ಕೂಟದ ಉಪಾಧ್ಯಕ್ಷ ಯನ್ ವಿಶ್ವನಾಥ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾ ಮೆನನ್, ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಂದಾರ ಸಮ್ಮಾನ್:
ಈ ಸಂದರ್ಭದಲ್ಲಿ ಡಾ. ಆರೂರು ಪ್ರಸಾದ್ ರಾವ್, ಎ ಸಿ ಭಂಡಾರಿ, ಡಾ. ಎಂ. ಪ್ರಭಾಕರ ಜೋಶಿ, ಹರಿಕೃಷ್ಣ ಪುನರೂರು, ಡಾ. ಜಯಚಂದ್ರ ವರ್ಮ ರಾಜ ಮಾಯಿಪ್ಪಾಡಿ ದಂಪತಿ ಇವರನ್ನು ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು. ಮಂದಾರ ರಾಮಾಯಣ ಸಪ್ತಾಹ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡಿ ಸನ್ಮಾನಿತರನ್ನು ಅಭಿನಂದಿಸಿದರು.
ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವೆರೆ ಕೂಟ ಶಕ್ತಿನಗರದ ಅಧ್ಯಕ್ಷೆ ಭಾರತಿ ಜಿ. ಅಮೀನ್ ಸ್ವಾಗತಿಸಿದರು. ತುಳುವೆರೆ ಕೂಟದ ಕಾರ್ಯದರ್ಶಿ ಸುಧಾಕರ ಜೋಗಿ ವಂದಿಸಿದರು. ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು.
ನಾಂದಿ ವಾಚನ: ಪುಂಚದ ಬಾಲೆ:
ಉದ್ಘಾಟನಾ ಸಮಾರಂಭದ ಬಳಿಕ ನಾಂದಿ ವಾಚನಕ್ಕಾಗಿ ಮಂದಾರ ರಾಮಾಯಣ ಗ್ರಂಥದ ಪ್ರತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ ಸಿ ಭಂಡಾರಿ ಪ್ರವಚನಕಾರರಿಗೆ ಹಸ್ತಾಂತರಿಸಿದರು. ನಂತರ ‘ಏಳದೆ ಮಂದಾರ ರಾಮಾಯಣ’ದ ಪ್ರಥಮ ಅಧ್ಯಾಯ ‘ಪುಂಚದ ಬಾಲೆ’ ಸುಗಿಪು – ದುನಿಪು ನಡೆಯಿತು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರವಚನ ನಡೆಸಿಕೊಟ್ಟರು; ತೋನ್ಸೆ ಪುಷ್ಕಳ ಕುಮಾರ್ ಹಾಗೂ ಮಂಜುಳಾ ಜಿ. ರಾವ್ ಇರಾ ಕಾವ್ಯವನ್ನು ವಾಚಿಸಿದರು.