ಕಲ್ಲಡ್ಕ ಶಾಲೆಯಲ್ಲಿ ಮಳೆಕೊಯ್ಲು ಘಟಕದ ಉದ್ಘಾಟನೆ
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಸಂರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ನಿರ್ಮಿಸಿದ ಮಳೆಕೊಯ್ಲು ಘಟಕದ ಉದ್ಘಾಟನೆಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠ್ಠಲ್ ನಾಯ್ಕ್‌ರವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಪ್ರತಿ ವರ್ಷ ಹೆಚ್ಚು ಮಳೆಯಾಗುವ ನಮ್ಮ ಜಿಲ್ಲೆಯಲ್ಲಿ ಈಗ ನೀರಿನ ಕೊರತೆ ಎದುರಾಗಿದ್ದು, ಭವಿಷ್ಯದಲ್ಲಿ ನೀರಿನ ಹಾಹಕಾರಕ್ಕೆ ಪರಿಹಾರವಾಗಿ ಈಗಿನಿಂದಲೇ ಪ್ರತಿ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು. ಜನರಲ್ಲಿ ಮಾಹಿತಿ ಹಾಗೂ ಆಸಕ್ತಿಯ ಕೊರತೆಯಿಂದ ಜೀವಜಲ ಸಮುದ್ರ ಸೇರುತ್ತಿದೆ. ಇಂತಹ ಸಂಗತಿಯನ್ನು ಮನಗಂಡ ಶ್ರೀರಾಮ ಶಾಲೆಯಲ್ಲಿ ಮಳೆಕೊಯ್ಲು ಆರಂಭಿಸಿದ್ದು ಶಾಲೆ ಮಾತ್ರವಲ್ಲದೇ ಬಾಳ್ತಿಲ ಗ್ರಾಮಕ್ಕೇ ಹೆಮ್ಮೆ ತರುವ ಸಂಗತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜಲಸಂರಕ್ಷಣೆಗೆ ಆದ್ಯತೆ ಕೊಡುವುದರೊಂದಿಗೆ ಇಂತಹ ಕ್ರಾಂತಿ ಮನೆ-ಮನೆಯಲ್ಲಿ ನಡೆಯಬೇಕು ಎಂದು ಹೇಳಿದರು.
ಮಳೆಕೊಯ್ಲು ವೈಯುಕ್ತಿಕವಾಗಿ ಅಳವಡಿಸಿಕೊಳ್ಳಲು ಖಾಸಗಿ ಬೋರುವೆಲ್‌ಗಳಿಗೆ ಜಲಪೂರಣ ಹಾಗೂ ಕೃಷಿ ಹೊಂಡದಂತಹ ಕಾರ್ಯಕ್ಕೆ ನರೇಗಾದಡಿಯಲ್ಲಿ ಸಿಗುವ ಅನುದಾನದ ಬಗ್ಗೆ ವಿಠ್ಠಲ್ ನಾಯ್ಕ್ ರವರು ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಳವಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನಿಂದ ಸಿಗುವ ಎಲ್ಲಾ ಸಹಕಾರವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀಗೋಪಾಲಾಚಾರ್, ಕುಲ್ಯಾರು ನಾರಾಯಣ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಶಾಲೆಯ ಕುಡಿಯುವ ನೀರಿನ ಉಸ್ತುವಾರಿಯಾದ ಸುಧನ್ವ ಶಾಸ್ತ್ರೀ, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.