60 ದಿನಗಳ ಹರಿಕಥಾ ಜ್ಞಾನ ಯಜ್ಞ ಉದ್ಘಾಟನೆ

ಉಡುಪಿ-  ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು(ರಿ)ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು(ರಿ)ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ(ರಿ)ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಪ್ರಸ್ತುತಪಡಿಸುವ 60 ದಿನಗಳ ಪರ್ಯಂತ ಹರಿಕಥಾ ಜ್ಞಾನ ಯಜ್ಞವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು .

 

ಉದ್ಘಾಟನೆಯ ನಂತರ  ಮಾತನಾಡಿದ ಶ್ರೀಗಳು  ಹರಿ ಎನ್ನುವ ಶಬ್ದಕ್ಕೆ ಎರಡು ಅರ್ಥ – ಒಂದು ಬೇಡವಾದ್ದನ್ನು ದೂರ ಮಾಡುವುದು,ಇನ್ನೊಂದು ಬೇಕಾದ್ದನ್ನು ಹತ್ತಿರ ಬರುವಂತೆ ಮಾಡುವುದು. ಹಾಗೆಯೇ ಹರಿಕಥೆಯಲ್ಲಿ ನಮ್ಮ ಮನಸ್ಸಿನ ಅಹಂಕಾರ,ಅಹಂಭಾವ,ದುಗುಡ ದುಮ್ಮಾನ ದೂರ ಮಾಡಿ ಭಗವಂತನ ಕಥೆ ಉಪಕಥೆಗಳಿಂದ ಮನಸ್ಸಿಗೆ ನೆಮ್ಮದಿ,ಶಾಂತಿಯನ್ನು ಹತ್ತಿರ ಮಾಡುವ ಮಾಧ್ಯಮ ಇದಾಗಿದೆ.ಎರಡು ತಿಂಗಳುಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ 60 ಮಂದಿ ಹರಿಕಥಾಕೀರ್ತನಕಾರರು ಭಾಗವಹಿಸಿ ಸೇವೆ ಮಾಡಲಿದ್ದಾರೆ,ಇಂತಹ ಕಾರ್ಯಗಳು ಶ್ರೀಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಿರಂತರ ನಡೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು. ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ದೇವಾನಂದ ಉಪಾದ್ಯಾಯ,ಮಹಾಬಲ ಶೆಟ್ಟಿ,ರುಕ್ಮಿಣಿ ಹಂಡೆ ಮೊದಲಾದವರು ಉಪಸ್ಥಿತರಿದ್ದರು.
ಹರಿಕಥಾ ಪರಿಷತ್ತಿನ ಉಡುಪಿ ಜಿಲ್ಲಾ ಸಂಚಾಲಕರಾದ ವೈ.ಅನಂತಪದ್ಮನಾಭ ಭಟ್ ಸ್ವಾಗತಿಸಿ,ಪ್ರಸ್ತಾವನೆ ಗೈದು,ಕಾರ್ಯಕ್ರಮ ನಿರ್ವಹಿಸಿದರು,ಪ್ರಧಾನ ಕಾರ್ಯದರ್ಶಿಗಳಾದ ತೋನ್ಸೆ ಪುಷ್ಕಳ್ ಕುಮಾರ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!