ಮರಳು ವಿತರಣೆಯಲ್ಲಿ ಅಕ್ರಮ: ಕ್ರಮಕ್ಕೆ ಜಿ.ಪಂ ಸದಸ್ಯರ ಒತ್ತಾಯ
ಉಡುಪಿ : ಮರಳು ಮಾರಾಟದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ
ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತಾಗಬೇಕು ಎಂಬ ಉದ್ದೇಶದಿಂದ ಆರಂಭವಾಗಿರುವ ಮರಳು ವಿತರಣೆಯಲ್ಲಿ ಅಕ್ರಮಗಳು ತಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ , ಬುಧವಾರ ಉಡುಪಿ ಜಿಲ್ಲಾ ಪಂಚಾಯತ್‍ನಲ್ಲಿ
ಬುಧವಾರ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ಸದಸ್ಯ ಬಾಬುಶೆಟ್ಟಿ, ಕುಂದಾಪುರ ತಾಲೂಕಿನಲ್ಲಿ ಮರಳು ಸಾಗಾಣಿಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ, ಸರಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದ್ದು, ಧಕ್ಕೆಯಲ್ಲಿ ತೆಗೆದ ಮರಳು
ಸ್ಟಾಕ್ ಯಾರ್ಡ್‍ಗೆ ಬರದೇ ಧಕ್ಕೆಯಿಂದಲೇ ವಾಹನಗಳಿಗೆ ಲೋಡ್ ಆಗುತ್ತಿದ್ದು, ಪ್ರಭಾವಿಗಳಿಗೆ ಮಾತ್ರ ಮರಳು ದೊರೆಯುತ್ತಿದ್ದು, ಬಡವರಿಗೆ ಸಿಗದಂತಾಗಿದೆ,ಮರಳು ಗುತ್ತಿಗೆ ಪಡೆದವರು ನಿಯಮಗಳ ಪಾಲನೆ ಮಾಡುತ್ತಿಲ್ಲ ಈ ಬಗ್ಗೆ ಸೂಕ್ತ
ಕ್ರಮ ಕೈಗೊಳ್ಳಬೇಕು ಎಂದರು.
ಈ ಕುರಿತು ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಂಜಿ ನಾಯ್ಕ್, ಮರಳು ಗುತ್ತಿಗೆ ಪಡೆದವರು ನಿಯಮಗಳನ್ನು ಪಾಲಿಸಿದಿದ್ದಲ್ಲಿ , ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ತನಿಖೆ ನಡೆಸಿ, ಅವರ ವಿರುದ್ದ ಸೂಕ್ತ
ಕ್ರಮಕೈಗೊಳ್ಳಲಾಗುವುದು ಎಂದರು, ಮರಳುಗಾರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದು ಸಿಇಓ ಪ್ರೀತಿ ಗೇಹಲ್ಲೋಟ್ ತಿಳಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ಬಿ.ಪಿ.ಎಲ್ ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸದಸ್ಯ ಜನಾರ್ಧನ ತೋನ್ಸೆ ಹೇಳಿದರು. ಈ ಕುರಿತು ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಈ ವರ್ಷ ಜಿಲ್ಲೆಯ ಒಟ್ಟು 6170 ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಸ್ವೀಕೃತವಾಗಿದ್ದು,2608 ಅರ್ಜಿಗಳು ವಿಲೇವಾರಿ ಆಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ , ಸರ್ವರ್ ಸಮಸ್ಯೆ ಇದ್ದು, ಶೀಘ್ರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಡಿತರ ಚೀಟಿ ಇರದೆ ಇದ್ದರೂ ಸಹ ತಾತ್ಕಾಲಿಕ ಕಾರ್ಡ್‍ನಲ್ಲಿ ಪಡಿತರ ಪಡೆಯುವಂತೆ ಹಾಗೂ ಬಾಕಿ ಉಳಿದಿರುವ 3449 ಅರ್ಜಿಗಳ ಚೆಕ್‍ಲಿಸ್ಟ್‍ಗಳನ್ನು ಮೊದಲ ಆದ್ಯತೆಯ ಮೇರೆಗೆ ತನಿಖೆ ಮಾಡಿ, ಅರ್ಜಿಗಳನ್ನು ಅನುಮೋದನೆ ಮಾಡುವಂತೆ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಸೂಚಿಸಿದರು. ಬಿ.ಪಿಎಲ್ ಕಾರ್ಡ್ ಇಲ್ಲದ ಕಾರಣ ಬಡವರಿಗೆ ಆಯುಷ್ಮಾನ್ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು, ಆರೋಗ್ಯ ಸಮಸ್ಯೆ ಇರುವ ಕುಟುಂಬದವರಿಗೆ ಆದ್ಯತೆಯಲ್ಲಿ ಕಾರ್ಡ್ ವಿತರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ತಿಳಿಸಿದರು.
ಜಿಲ್ಲೆಯ ಸ್ಥಳೀಯ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ದಾಖಲೆ ಇಲ್ಲದೆ, ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗದೇ ಇದ್ದು, ಇದರಿಂದ ಫಿ.ಎಫ್ ಮುಂತಾದ ಸೌಲಭ್ಯ ಪಡೆಯುವುದು ಕಷ್ಟವಾಗಿದೆ ಎಂಬ
ಚರ್ಚೆಗೆ ಸಂಬಂದಿಸಿದಂತೆ ಉತ್ತರಿಸಿದ , ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಾರ್ಮಿಕರ ಜನ್ಮ ದಿನಾಂಕದ ಯಾವುದೇ ದಾಖಲೆ ಇಲ್ಲದೆ ಇರುವ ಕಾರಣ ಸಿವಿಲ್ ನ್ಯಾಯಾಲಯದ ಅನುಮತಿ ಪಡೆದು ಆಧಾರ್ ಕಾರ್ಡ್ ಪಡೆಯಬಹುದು. ಹಾಗೂ ಈ ಕುರಿತಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಗತ್ಯವಿರುವೆಡೆ ಕ್ಯಾಂಪ್‍ಗಳನ್ನು ಏರ್ಪಡಿಸಿ ಅಗತ್ಯ ನೆರವು ಒದಗಿಸಲಾಗುತ್ತದೆ ಎಂದರು.
ಹಾವಂಜೆಯಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಭೂಮಿ ಒತ್ತುವರಿ ಆಗಿದ್ದು, ಕೂಡಲೇ ಅದನ್ನು ತೆರವುಗೊಳಿಸುವಂತೆ ಸದಸ್ಯ ಜನಾರ್ಧನ ತೋನ್ಸೆ ಆಗ್ರಹಿಸಿದರು. ಸದ್ರಿ ಅತಿಕ್ರಮಣವನ್ನು ಶೀಘ್ರವೇ ತೆರವುಗೊಳಿಸುವಂತೆ ಸಿಇಓ ಪ್ರೀತಿ ಗೇಹಲ್ಲೋಟ್ ತಹಶೀಲ್ದಾರರಿಗೆ ಸೂಚಿಸಿದರು. ಜಿಲ್ಲೆಯಲ್ಲಿನ ಅಂಗನವಾಡಿಗಳ ಹೆಸರಲ್ಲಿ ಆರ್.ಟಿ.ಸಿ ಪಡೆಯುವ ಬಗ್ಗೆ ಆಗ್ರಹಿಸಿದ ಜನಾರ್ಧನ ತೋನ್ಸೆ, ಹಾವಂಜೆ ಅಂಗನವಾಡಿಯ ಆರ್‍ಟಿಸಿ ಆಗಿಲ್ಲವೆಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೀತಿ ಗೆಹಲೋತ್, ಜಿಲ್ಲೆಯ ಎಲ್ಲಾ
ಅಂಗನವಾಡಿಗಳ ಆರ್‍ಟಿಸಿ ಮಾಡಿಸಿ, ದಾಖಲೆಗಳನ್ನು ಮುಂದಿನ ಸಭೆಯೊಳಗೆ ಹಾಜರುಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಗೆ ಆದೇಶಿಸಿದರು.
ಸದಸ್ಯ ಸುಧಾಕರ ಶೆಟ್ಟಿ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಬಜೆ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆ ಹಾಗೂ, ಭತ್ತ, ಬಾಳೆ, ಅಡಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಿಲ್ಲವೆಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರೀತಿ ಗೆಹಲೋತ್ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚೆಯಗುವ ವಿಷಯಗಳ ಕುರಿತು ಅಧಿಕಾರಿಗಳು ಪಾಲಿಸದಿದ್ದಲ್ಲಿ ಕಟ್ಟನಿಟ್ಟಿನ ಕ್ರಮ
ಕೈಗೊಳ್ಳಲಾಗುತ್ತದೆ ಎಂದು ಪ್ರೀತಿ ಗೆಹಲೋತ್ ಎಲ್ಲಾ ಅಧಿಕಾರಿಗೆ ಖಡಕ್ ಆದೇಶ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ
ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ , ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.