ಚಂಡಮಾರುತ ಭೀತಿ: ದಕ ಜಿಲ್ಲಾ ಶಾಲಾ, ಕಾಲೇಜ್ ಗೆ ನಾಳೆ(ಅ.25) ರಜೆ
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಮುಂದಿನ24 ಗಂಟೆಯಲ್ಲಿ ಕರಾವಳಿ ಭಾಗದ ಮಂಗಳೂರಿನಲ್ಲಿ ಭೀಕರ ಚಂಡಮಾರುತ ಅಪ್ಪಳಿಸುವ ಹವಾಮಾನ ಇಲಾಖೆಯ ಸೂಚನೆ ಮೇರೆಗೆ ಮುನ್ನೆಚ್ಚರಿಕೆಯಾಗಿ ನಾಳೆ(ಅ.25) ರಂದು ಜಿಲ್ಲೆಯ ಶಾಲಾ ಕಾಲೇಜ್ಗೆ (ಪಿಯು) ಜಿಲ್ಲಾಡಳಿತ ರಜೆ ಘೋಷಿಸಿದೆ.
ಕರ್ನಾಟಕ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲ ಬಂದರುಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ಅತ್ತ ಉತ್ತರ ಕರ್ನಾಟಕದ ಜನ ಮಳೆ, ಪ್ರವಾಹದಿಂದ ತತ್ತರಿಸಿರುವಾಗಲೇ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿಮೀ ದೂರದ ಅರಬ್ಬೀ ಸಮುದ್ರದ ಮಧ್ಯೆ ತೀವ್ರ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು, ಮಾರುತಗಳು ಸುಂಟರಗಾಳಿಯಾಗಿ ಮಾರ್ಪಡುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಈ ಮಾರುತಗಳು ದಕ್ಷಿಣದಿಂದ ಈಶಾನ್ಯ ಭಾಗ ಎಂದರೆ, ಕರ್ನಾಟಕದ ಕರಾವಳಿ ಮತ್ತು ಗೋವಾ ಭಾಗದತ್ತ ಬರುತ್ತಿದ್ದು, ತೀವ್ರ ಗಾಳಿ ಮತ್ತು ಮಳೆಯೊಂದಿಗೆ ಕರಾವಳಿಗೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಈ ಮಾರುತಗಳ ಹೊಡೆತ ಕರಾವಳಿಗೆ ತಟ್ಟಲಿದೆ ಎನ್ನುವ ಎಚ್ಚರಿಕೆ ನೀಡಲಾಗಿದೆ