ಪವಿತ್ರ ಗುರುವಾರ: ಧರ್ಮಗುರುಗಳು ಬಟ್ಟೆ ಒಗೆಯುವ ಕಲ್ಲಿನಂತೆ..!
ಉಡುಪಿ : ಇಂದು ಪವಿತ್ರ ಗುರುವಾರ. ಕ್ರೈಸ್ತ ಸಮಾಜ ಬಾಂಧವರಿಗೆ ವಿಶೇಷವಾದ ದಿನ. ಪಾಸ್ಖಾ ತ್ರಿದಿನದ ಮೊದಲನೇ ದಿನ. ಪ್ರಭುವಿನ ಭೋಜನದ ಸ್ಮರಣೆಯ ದಿನವಾದ ಪವಿತ್ರ ಗುರುವಾರದ ಸಂಜೆಯಿಂದ ಪಾಸ್ಖಾ ತ್ರಿದಿನ ಆರಂಭವಾಗುತ್ತದೆ. ಪವಿತ್ರ ಗುರುವಾರ ಪ್ರಭುವಿನ ಸೇವೆಯನ್ನು ಸ್ಮರಿಸುವ ದಿನ. ಇದನ್ನು ಜಲ್ವಂತಗೊಳಿಸಲು ಪಾದ ಸ್ಥಾನ ವಿಧಿ ಒಂದು ನಿದರ್ಶನವಾಗಿದೆ. ಇನ್ನು ಪರಮಪ್ರಸಾದ ಸ್ಥಾಪನೆಯ ಸ್ಮರಣೀಯ ದಿನವೂ ಆಗಿದೆ. ಆದರೆ ನಾವು ಪರಮ ಪ್ರಸಾದವನ್ನು ಭೌತಿಕವಾಗಿ ಸ್ವೀಕರಿಸಲು ಸಾಧ್ಯವಾಗದೇ ಇದ್ದರೂ ಈ ಕುಟುಂಬ ಪ್ರಾರ್ಥನೆಯೊಂದಿಗೆ ಆಧ್ಯಾತ್ಮಿಕವಾಗಿ ಪರಮ ಪ್ರಸಾದವನ್ನು ಸ್ವೀಕರಿಸಿ ಪ್ರಭು ಕ್ರಿಸ್ತರೊಂದಿಗೆ ಐಕ್ಯವಾಗುವ ವರದಾನಗಳಿಗಾಗಿ ಪ್ರಾರ್ಥಿಸೋಣ. ಪ್ರಭು ಯೇಸು ತನ್ನ ಜೀವನದಲ್ಲಿ ತನ್ನ ಶಿಷ್ಯರನ್ನು ಎಷ್ಟು ಆಳವಾಗಿ ಪ್ರೀತಿಸಿದ್ದಾರೆಂದು ನಾವೆಲ್ಲವೂ ಬೈಬಲ್ನಲ್ಲಿ ಓದಿದ್ದೇವೆ. ಸುಮಾರು ಏಳನೇ ಶತಮಾನದಿಂದ ಪಾದ ಸ್ಥಾನದ ಆಚರಣೆ ಜಾರಿಯಲ್ಲಿದೆ. ಇದು ಸೇವೆ ಮಾಡಲು ಪ್ರಭು ನಮಗೆಲ್ಲರಿಗೂ ನೀಡಿರುವ ಕರೆಯಾಗಿದೆ.
ಪವಿತ್ರ ಗುರುವಾರ ಯಾಜಕರು ಬಟ್ಟೆ ಒಗೆಯುವ ಕಲ್ಲಿನಂತೆ ಪವಿತ್ರ ವಾರದ ಮೂರು ಪವಿತ್ರ ದಿನಗಳಲ್ಲಿ ಮೊದಲನೇ ದಿನ ಪವಿತ್ರ ಗುರುವಾರ. ಧರ್ಮಸಭೆಯಲ್ಲಿ ಪವಿತ್ರ ಗುರುವಾರಕ್ಕೆ ಮೂರು ವಿಶೇಷತೆಗಳಿವೆ.
*ಪರಮ ಪ್ರಸಾದ ಸಂಸ್ಕಾರದ ಸ್ಥಾಪನೆ :* ಯೇಸುಸ್ವಾಮಿ ತನ್ನ ಕೊನೆಯ ಬೋಜನವನ್ನು ಶಿಷ್ಯರೊಡಗೂಡಿ ಸೇವಿಸುವಾಗ ಸಂಸ್ಕಾರವನ್ನು ಸ್ಥಾಪಿಸಿದರು. ಈ ಸಂಸ್ಕಾರವೇ ಪರಮ ಪ್ರಸಾದದ ಸಂಸ್ಕಾರ. ಭೋಜನದ ಕೊನೆಯಲ್ಲಿ ಯೇಸುಸ್ವಾಮಿ ರೊಟ್ಟಿ ಮತ್ತು ದಾಕ್ಷ ರಸವನ್ನು ತೆಗೆದುಕೊಂಡು ಅವುಗಳನ್ನು ಆಶೀರ್ವಾದಿಸಿ , ‘ಇದು ನನ್ನ ಶರೀರ ಪೂಜಿಸಿರಿ.. ಇದು ನನ್ನ ರಕ್ತ ಪಾನ ಮಾಡಿರಿ’ ಎಂದು ನುಡಿದರು. ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ ಎನ್ನುತ್ತಾ ಪರಮ ಪ್ರಸಾದ ಸಂಸ್ಕಾರದ ಬುನಾದಿಯನ್ನು ಹಾಕಿದರು. ಅಂದಿನಿಂದ ಇವತ್ತಿನವರೆಗೂ ಈ ಪರಮ ಪ್ರಸಾದದ ಸಂಸ್ಕಾರವನ್ನು ಪ್ರತಿಯೊಬ್ಬ ಕ್ರೈಸ್ತರು ಆಚರಿಸುತ್ತಾ ಬಂದಿರುತ್ತಾರೆ.
*ಯಾಜಕ (ಧರ್ಮಗುರು) ಅಭಿಷೇಕ ಸಂಸ್ಕಾರದ ಸ್ಥಾಪನೆ :* ಪರಮ ಪ್ರಸಾದ ಸಂಸ್ಕಾರ ಧರ್ಮ ಸಭೆಯಲ್ಲಿ ಆಚರಿಸಬೇಕಾದರೆ ಯಾಜಕರ ಅಗತ್ಯವಿದೆ. ಅದಕ್ಕೋಸ್ಕರ ಈ ದಿನ ಯೇಸು ಸ್ವಾಮಿ ಯಾಜಕ ಅಭಿಷೇಕದ ಸಂಸ್ಕಾರವನ್ನು ಸ್ಥಾಪಿಸಿದರು. ಅಭಿಶಕ್ತಗೊಂಡ ಪ್ರತಿಯೊಬ್ಬ ಯಾಜಕ ಪರಮ ಪ್ರಸಾದದ ಸಂಸ್ಕಾರವನ್ನು ಜನರಿಗೋಸ್ಕರ ಅರ್ಪಿಸುತ್ತಾನೆ. ಪವಿತ್ರ ಬಲಿಪೂಜೆಯಲ್ಲಿ ಯೇಸುವಿನ ಆಜ್ಞೆಗಳನ್ನು ಪಾಲಿಸಿ, ಈ ಸಂಸ್ಕಾರವನ್ನು ಪವಿತ್ರ ಧರ್ಮಸಭೆಯ ಸದಸ್ಯರಿಗೆ ನೀಡುತ್ತಾನೆ.
*ಸೇವೆ ಪ್ರೀತಿ ತ್ಯಾಗದ ಉಪದೇಶ :* ‘ನಾನು ನಿಮ್ಮನ್ನು ಪ್ರೀತಿಸಿದಂತೆ, ಪರರನ್ನು ಪ್ರೀತಿಸು’ ಎಂಬ ಕಟ್ಟಳೆಯನ್ನು ಯೇಸು ಸ್ವಾಮಿ ಶಿಷ್ಯರಿಗೆ ನೀಡುತ್ತಾರೆ. ಕೊನೆಯ ಭೋಜನದ ವೇಳೆ ಯೇಸುಸ್ವಾಮಿ ಅತ್ಯಂತ ದೀನತೆಯಿಂದ ಶಿಷ್ಯರ ಪಾದಗಳನ್ನು ತೊಳೆದು, ಸೇವೆಯ ಪ್ರಾಮುಖ್ಯತೆಯನ್ನು ಶಿಷ್ಯರಿಗೆ ತಿಳಿಸುತ್ತಾರೆ. ಪಾದಸ್ನಾನ ಮೂಲಕ ದೀನತೆಯ, ಸೇವೆಯ ಮೌಲ್ಯವನ್ನು ಜನರಿಗೆ ಯೇಸು ಸ್ವಾಮಿ ನೀಡುತ್ತಾರೆ. ನಾನು ನಿಮ್ಮ ಪಾದಗಳನ್ನು ತೊಳೆದಂತೆ ನೀವು ಪರರ ಪಾದಗಳನ್ನು ತೊಳೆಯಿರಿ ಎಂದು ಯೇಸುಸ್ವಾಮಿ ಆಜ್ಞಾಪಿಸುತ್ತಾರೆ.
ಪವಿತ್ರ ಗುರುವಾರದ ಇನ್ನೊಂದು ವಿಶೇಷತೆ ಎಂದರೆ, ಇಂದು *ಯಾಜಕರ ಹಬ್ಬ*. ಯಾಜಕರ ಸೇವೆ, ತ್ಯಾಗ, ಬಲಿದಾನದ ನೆನಪು ತೆಗೆದು ಅವರಿಗೋಸ್ಕರ ಪ್ರಾರ್ಥಿಸುವ ದಿನ. ದೇವರ ಕರೆಗೆ ಓಗೊಟ್ಟು ಎಲ್ಲವನ್ನು ತ್ಯಾಗ ಮಾಡಿ ದೇವರ ಸೇವೆ ಮಾಡುವ ಯಾಜಕರಿಗೋಸ್ಕರ ದೇವರಲ್ಲಿ ಪ್ರಾರ್ಥಿಸುವ ಸುದಿನ. ಧರ್ಮಸಭೆಯಲ್ಲಿ ಯಾಜಕರಿಲ್ಲದೆ ಸಂಸ್ಕಾರಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅಭಿಶಕ್ತರಿಗೋಸ್ಕರ ಪ್ರಾರ್ಥಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಯಾಜಕ ಜೀವನದ ಕೆಲವು ಸತ್ಯಗಳನ್ನು ನಾನು ನಿಮ್ಮ ಮುಂದಿಡಲು ಬಯಸುತ್ತೇನೆ. 1*ಯಾಜಕರು ಬಟ್ಟೆ ಹೊಗೆಯುವ ಕಲ್ಲಿನಂತೆ.* ಎಲ್ಲರೂ ಬಂದು ಆ ಕಲ್ಲಿನ ಮೇಲೆ ತಮ್ಮ ಕೊಳಕನ್ನು ಒಗೆಯುತ್ತಾರೆ. ಆದರೆ ಆ ಕಲ್ಲಿನ ಭಾವನೆಗಳಿಗೆ ಸ್ಪಂದಿಸುವವರು ಬಹಳಷ್ಟು ವಿರಳ. ಯಾಜಕರು ಮನುಷ್ಯರು. ಅವರಿಗೂ ಭಾವನೆಗಳಿವೆ. ಅವರು ಕುಟುಂಬದಿಂದ ಬಂದವರು ಎಂಬುದನ್ನು ಅರಿಯಬೇಕಾಗಿದೆ. ಯಾಜಕರ ಭಾವನೆಗಳೊಂದಿಗೆ ಆಟವಾಡುವವರು ತುಂಬಾ ಜನರಿದ್ದಾರೆ. ಯಾಜಕರ ಭಾವನೆಗಳಿಗೆ ಸ್ಪಂದಿಸುವ ಅಗತ್ಯ ಎಲ್ಲರ ಮೇಲಿದೆ.
2. *ಯಾಜಕರು ಸಂಪೂರ್ಣರಲ್ಲ.* ದೇವರೇ ಅವರನ್ನು ಕರೆದು ಸಂಪೂರ್ಣಗೊಳಿಸುತ್ತಾರೆ. ಯೇಸುಸ್ವಾಮಿ ತನ್ನ ಶಿಷ್ಯರನ್ನು ಕರೆದಾಗ ಯಾರೂ ಸಂಪೂರ್ಣರಾಗಿರಲಿಲ್ಲ. ಯೇಸು ಸ್ವಾಮಿ ಅವರನ್ನು ಕರೆದು ತನ್ನ ಶಕ್ತಿಯಿಂದ ಬಲಗೊಳಿಸಿ’ ಆಜ್ಞೆಗಳನ್ನು ನೀಡಿ ಕಳುಹಿಸಿದರು. ತಪ್ಪು ಮಾಡುವುದು ಸಹಜ. ಯಾಜಕರು ತಪ್ಪು ಮಾಡಿದಾಗ ಅದರ ಉತ್ಪ್ರೇಕ್ಷೆ ಸಲ್ಲದು. ಯಾಜಕರ ಒಳಿತಿನಲ್ಲಿ ಅವರ ಸಂಗಡ ಇರುವವರು ಅನೇಕ. ಆದರೆ ಅವರ ನ್ಯೂನ್ಯತೆಗಳಿಗೆ ತಪ್ಪು ಮಾಡಿದಾಗ, ಅವರ ಸಂಗಡ ಇದ್ದು, ದಾರಿ ತಪ್ಪಿದಾಗ, ಪ್ರೀತಿಯಿಂದ ಸರಿದಾರಿಗೆ ತರುವವರು ತುಂಬಾ ವಿರಳ. ಯಾಜಕರ ತಪ್ಪುಗಳನ್ನು ಬಿಂಬಿಸುವವರು ಜಾಸ್ತಿ. ಅವರ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಸೃಷ್ಟಿಸಿ ಸೋಷಲ್ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರು ಬಹಳಷ್ಟಿದ್ದಾರೆ. ದೇವರು ಒಬ್ಬರು ಪರಿಪೂರ್ಣರು. ನಾವೆಲ್ಲರೂ ನಮ್ಮ ಸ್ವರ್ಗದ ತಂದೆಯಂತೆ ಪರಿಪೂರ್ಣರಾಗಲು ಪ್ರಯತ್ನಿಸುತ್ತಿದ್ದೇವೆ.
3. *ಯಾಜಕರಿಗೆ ಕೃತಜ್ಞರಾಗಿ., ಕೃತಘ್ನರಾಗಬೇಡಿ :* ಯಾಜಕರು ಸೇವೆ ಮಾಡಲು ಎಲ್ಲವನ್ನೂ ತೊರೆದು ಬಂದಿರುತ್ತಾರೆ. ಅವರ ಜನರೇ, ಅವರ ಕುಟುಂಬ. ಒಂದು ಧರ್ಮ ಕೇಂದ್ರದಲ್ಲಿ ಧರ್ಮಗುರು ಸೇವೆ ಸಲ್ಲಿಸುವಾಗ ಅವರ ಸೇವೆಯನ್ನು ಮನ್ನಿಸಿ ಕೃತಜ್ಞರಾಗೋಣ. ಅವರ ಕಷ್ಟ ದುಃಖ – ನೋವು ಗಳಿಗೆಲ್ಲ ಭಾಗಿಯಾಗೋಣ. ಅವರ ಸೇವೆಯನ್ನು ಸ್ಮರಿಸೋಣ. ಮುಖ್ಯವಾಗಿ ಒಬ್ಬ ಧರ್ಮಗುರು ನಿವೃತ್ತ ಗೊಂಡಾಗ, ಅನಾರೋಗ್ಯದಿಂದ ಬಳಲುವಾಗ, ಸೇವೆಯ ಜೀವನ ಸರಿದು ತನ್ನ ಮುಪ್ಪಿನಲ್ಲಿ ಬಳಲಿ ಬೆಂಡಾಗುವಾಗ, ಅವರ ಭೇಟಿ ಮಾಡಿ ಸಾಂತ್ವನ ಹೇಳಿ ಪ್ರೀತಿಯನ್ನು ತೋರಿಸುವ ವ್ಯಕ್ತಿಗಳಗೋಣ.
4. *ಯಾಜಕರು ಪಡುವ ನೋವು ಭಾವನೆಗಳಿಗೆ ಕ್ರಿಸ್ತರೆ ಸಾಂತ್ವನ.* ಯಾಜಕರ ಬಗ್ಗೆ ಕೀಳಾಗಿ ಮಾತನಾಡುವವರು ಹಲವರಿದ್ದಾರೆ. ನಾನು ಕೆಲವರಿಗೆ ಉತ್ತರ ಕೊಟ್ಟಿದ್ದು ಇದೆ. ‘ನಿಮ್ಮ ಕುಟುಂಬದಲ್ಲಿ ಒಬ್ಬ ಯಾಜಕನನ್ನು ಅರಳಿಸಿ ತೋರಿಸಿ, ಆವಾಗ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ’ ಎಂದು. ನನ್ನ ಅನುಭವದ ಪ್ರಕಾರ.. ಕಷ್ಟ, ದುಃಖ, ನೋವು ಭಾವನೆಗಳಿಗೆ, ಮಾನಸಿಕ ಒತ್ತಡಗಳಿಗೆಲ್ಲ ನಮ್ಮ ಸಂಗಡ ಇರುವವರು ಯೇಸುಸ್ವಾಮಿ ಹೊರತು ಬೇರಾರಿಲ್ಲ. ನಮ್ಮ ಕುಟುಂಬದ ಸದಸ್ಯರು, ಬಂಧು ಮಿತ್ರರು ಸ್ವಲ್ಪ ಮಟ್ಟಿಗೆ ಸಾಂತ್ವನ ನೀಡಬಲ್ಲರು. ಒಬ್ಬ ಯಾಜಕನ ನೋವುಗಳು ಬೆಳಕಿಗೆ ಬರುವಾಗ ಅವರ ಸಂಗಡ ಇದ್ದು, ಸಾಂತ್ವನ ನೀಡುವ ಜನರು ಬೇಕಾಗಿದ್ದಾರೆ.
5. *ಯಾಜಕರಿಗೆ ನಮ್ಮ ಪ್ರಾರ್ಥನೆಯ ಅಗತ್ಯವಿದೆ*. ಯಾಜಕರಲ್ಲಿ ಪ್ರಾರ್ಥಿಸಿ ಎನ್ನುವವರು ಅನೇಕರು. ಅದರೆ ಯಾಜಕರಿಗೋಸ್ಕರ ಪ್ರಾರ್ಥಿಸುವವರು ವಿರಳ. ಯಾಜಕರ ಸೇವೆಯಲ್ಲಿ ಜನರ ಪ್ರಾರ್ಥನೆಯ ಬಲ ತುಂಬಾ ಅಗತ್ಯ. ಒಬ್ಬ ಯಾಜಕನ ಸೇವೆ ಸಂಪೂರ್ಣವಾಗುವುದು ಜನರ ಪ್ರಾರ್ಥನೆಗಳಿಂದ. ಅದಕ್ಕೋಸ್ಕರ ಇಂದು ನಮ್ಮ ಯಾಜಕರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸೋಣ. ದೇವರ ಕೃಪೆ ಯಾಜಕರಿಗೆ ಅಗತ್ಯ. ದೈವಿಕ ಕರೆಯೊಂದಿಗೆ ಜೀವಿಸಲು ದೇವರ ಕೃಪ ವರಗಳು ಮತ್ತು ಪವಿತ್ರಾತ್ಮರ ಶಕ್ತಿ ಅಗತ್ಯವಿದೆ. ನಮ್ಮ ಧರ್ಮ ಗುರುಗಳಿಗೊಸ್ಕರ ಪ್ರಾರ್ಥಿಸೋಣ.
6. *ನಮ್ಮ ಕುಟುಂಬಗಳಲ್ಲಿ ಯಾಜಕರಾಗಲು ಪ್ರೇರಣೆ :* ದೈವಿಕರೆಗೆ ಸ್ಪಂದನೆ ಅಗತ್ಯ. ಮುಂದಿನ 50 ವರ್ಷಗಳಲ್ಲಿ ನಮ್ಮ ಧರ್ಮ ಕೇಂದ್ರಗಳಲ್ಲಿ ಯಾಜಕರು ಬೇಕಾದರೆ, ಇಂದೇ ನಮ್ಮ ಕುಟುಂಬಗಳಲ್ಲಿ ಮಕ್ಕಳನ್ನು ವಿಶ್ವಾಸದಿಂದ ಬೆಳೆಸಿ, ಧರ್ಮ ಗುರುವಾಗಲು ಪ್ರೇರಣೆ ನೀಡುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ನಮ್ಮ ಕುಟುಂಬಗಳು ಆಧುನಿಕತೆಯ ಗಾಳಿಯಲ್ಲಿ ತೇಲುವುದು ಕಾಣಸಿಗುತ್ತದೆ. ನಮ್ಮ ಕುಟುಂಬಗಳಲ್ಲಿ ಮೊದಲು ಹಿರಿಯರು, ಮಕ್ಕಳನ್ನು ಯಾಜಕರಾಗಲು ಹುರಿದುಂಬಿಸುತ್ತಿದ್ದರು. ಆದರೆ ಆ ವಾತಾವರಣ ಕಡಿಮೆಯಾದಂತೆ ಭಾಸವಾಗುತ್ತಿದೆ. ಕುಟುಂಬದಲ್ಲಿ ತಂದೆ ತಾಯಿ, ಹಿರಿಯರು, ಮಕ್ಕಳನ್ನು ಯಾಜಕರಾಗಲು ದೈವಿ ಕರೆಯನ್ನು ಸ್ವೀಕರಿಸಲು ಪ್ರೋತ್ಸಾಹಿಸಬೇಕಾಗಿದೆ.
ಪವಿತ್ರ ವಾರದ ಇನ್ನೆರಡು ವಿಶೇಷತೆಗಳು : ಪವಿತ್ರ ಶುಕ್ರವಾರ ಮತ್ತು ಪಾಸ್ಖಾ ಹಬ್ಬದ ಸಂಭ್ರಮ. ಪವಿತ್ರ ಶುಕ್ರವಾರ ಯೇಸು ಈ ಭೂಲೋಕಕ್ಕೋಸ್ಕರ, ಪಾಪದ ಕೂಪಕ್ಕೆ ಬಿದ್ದಿದ್ದ ಮನುಕುಲದ ರಕ್ಷಣೆಗೋಸ್ಕರ ಶಿಲುಬೆಯ ಮೇಲೆ ಪ್ರಾಣ ಕೊಟ್ಟ ದಿನ. ಪಾಸ್ಖಾ ಹಬ್ಬ ಅಥವಾ ಯೇಸುವಿನ ಪುನರುತ್ಥಾನ ಯೇಸು ಮೃತ್ಯುಂಜಯಗೊಂಡ ದಿನ. ಸಾವಿನ ಸಂಕೋಲೆಗಳನ್ನು ಮುರಿದು ಜಯಶೀಲರಾದ ದಿನ. ಇವುಗಳನ್ನು ನಾವು ಈ ವಾರದಲ್ಲಿ ಮನೆಯಲ್ಲಿ ಕುಳಿತು ಸ್ಮರಿಸುವವರಿದ್ದೇವೆ.
ಯಾಜಕನ ಜೀವನದಲ್ಲಿ ಈ ಮೂರು ದಿನಗಳು ಖಂಡಿತ ಬರುತ್ತವೆ. ಪವಿತ್ರ ಗುರುವಾರ ಯಾಜಕನ ಪ್ರಶಂಸೆಯ ದಿನ ಆಗಬಹುದು. ಪವಿತ್ರ ಶುಕ್ರವಾರ ಯಾಜಕನ ಜೀವನದಲ್ಲಿ ಕಷ್ಟ ದುಃಖ ಬಂದು ತನ್ನ ಪ್ರೀತಿಯ ಜನರೇ ಯಾಜಕನ ಅವಹೇಳನ ಮಾಡಬಹುದು. ಆದರೆ ಯೇಸು ಸ್ವಾಮಿ ಪುನರುತ್ಥಾನ ಗೊಂಡಂತೆ ಒಬ್ಬ ಯಾಜಕ ಕೂಡ ತಾನು ತನ್ನ ಎಲ್ಲಾ ಭಾವನೆಗಳಿಗೆ ಉತ್ತರವೆಂಬಂತೆ ಜಯಶೀಲರಾಗಬಹುದು. ಬನ್ನಿ, ನಮ್ಮ ಯಾಜಕರನ್ನು ಅಭಿನಂದಿಸೋಣ. ಮತ್ತು ಈ ಪವಿತ್ರ ವಾರದ ಎಲ್ಲಾ ವಿಧಿಗಳಲ್ಲಿ ಭಕ್ತಿಯಿಂದ ಭಾಗವಹಿಸಿ, ದೇವರ ಕೃಪಾ ವರಗಳಿಗೆ ಪಾತ್ರರಾಗೋಣ. ವಿಶ್ವವೇ ಇಂದು ಮಹಾಮಾರಿ ಕೋರೊನ ರೋಗದಿಂದ ಬಳಲುತ್ತಿದೆ. ಪವಿತ್ರ ವಾರದ ಪವಿತ್ರವಾದ ಈ ಮೂರು ದಿನಗಳಲ್ಲಿ ನಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ವಿಶೇಷವಾಗಿ ಈ ಮಾರಕ ರೋಗ ನಮ್ಮೆಲ್ಲರಿಂದ ದೂರ ಸರಿಯಲಿ ಎಂದು ಪ್ರಾರ್ಥಿಸೋಣ. ದೇವರ ಆಶೀರ್ವಾದ ಸದಾ ತಮ್ಮೆಲ್ಲರ ಮೇಲೆ ಇರಲಿ.
ವಂ. ಫಾ. ರಿಚಾರ್ಡ್ ಡಿಸೋಜಾ ನಿರ್ದೇಶಕರು, ಕೆನರಾ ಸಂಪರ್ಕ . ಕೇಂದ್ರ ಮಂಗಳೂರು [email protected]
Meaningful Article. I appreciate the Sacrifice done by the Priests.
God Protect Them.