ಗುರುಪೂರ್ಣಿಮೆ: ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿಯಾದ ಪೇಜಾವರ ಶ್ರೀ
ಉಡುಪಿ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪರ್ಯಾಯ ಮುಗಿದ ಬಳಿಕ ಕಚೇರಿಗೆ ಭೇಟಿ ನೀಡುವಂತೆ ಹಿಂದೆ ಪ್ರಧಾನಿ ಮೋದಿ ಶ್ರೀಗಳಿಗೆ ಆಹ್ವಾನ ನೀಡಿದ್ದರು. ಅದರಂತೆ ದೆಹಲಿ ಪ್ರವಾಸದಲ್ಲಿದ್ದ ಶ್ರೀಗಳು ಪ್ರಧಾನಿ ಭೇಟಿಗೆ ಉತ್ಸುಕತೆ ತೋರಿದಾಗ, ಪ್ರಧಾನಿ ಕಚೇರಿಯಿಂದ ಭೇಟಿಗೆ ಸಮಯ ನಿಗದಿಯಾಯಿತು. ಇಬ್ಬರೂ ಉಭಯ ಕುಶಲೋಪರಿ ನಡೆಸಿದರು ಎಂದು ಶ್ರೀಗಳ ಆಪ್ತ ಸುನೀಲ್ ತಿಳಿಸಿದರು.
ಗುರುಪೂರ್ಣಿಮೆಯ ದಿನ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭ ಕರಾವಳಿಯ ಸಾಂಪ್ರದಾಯಿಕ ದೇವರ ಉತ್ಸವ ಮೂರ್ತಿಯ ಪ್ರಭಾವಳಿಯನ್ನು ಪ್ರಧಾನಿಗೆ ಉಡುಗೊರೆ ನೀಡಲಾಯಿತು ಎಂದು ಅವರು ತಿಳಿಸಿದರು.
ಅವಕಾಶ ಸಿಕ್ಕರೆ ಗೋಹತ್ಯೆ ನಿಷೇಧ, ರಾಮಮಂದಿರ, ಗಂಗಾ ನದಿ ಶುದ್ಧೀಕರಣ ಕುರಿತು ಪ್ರಧಾನಿ ಬಳಿ ಚರ್ಚಿಸುವುದಾಗಿ ಶ್ರೀಗಳು ಹಿಂದೆ ತಿಳಿಸಿದ್ದರು. ಆದರೆ, ಭೇಟಿವೇಳೆ ಯಾವ ವಿಚಾರಗಳು ಚರ್ಚೆಗೆ ಬಂದವು ಎಂಬ ಮಾಹಿತಿ ಇಲ್ಲ ಎಂದು ಹೇಳಿದರು.