ಜಿಟಿಟಿಸಿ ಕಾಲೇಜಿಗೆ ಶೋಭಾರದ್ದು ನಯಾ ಪೈಸೆ ಕೊಡುಗೆ ಇಲ್ಲ: ಪ್ರಮೋದ್
ಉಡುಪಿ: ಉಪ್ಪೂರು ಪ್ರೌಢಶಾಲೆ ಬಳಿ ಸ್ಥಾಪಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು
ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರ ಸಾಧನೆ ಶೂನ್ಯ.
ಅವರು ಏನು ಕೆಲಸ ಮಾಡದೆ. ಯಾರೋ ಮಾಡಿದ ಕೆಲಸವನ್ನು ತಾನು ಮಾಡಿದ್ದೇನೆಂದು
ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ದೂರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಟಿಟಿಸಿ ಕಾಲೇಜು ಶೋಭಾ ಅವರ ಪ್ರಯತ್ನದಿಂದ ನಿರ್ಮಿಸಲಾಗಿದೆ ಎಂಬ ಶಾಸಕ ರಘುಪತಿ ಭಟ್ರ ಟ್ವೀಟ್ ಸತ್ಯಕ್ಕೆ
ದೂರವಾಗಿದ್ದು, ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ ಎಂಬುವುದನ್ನು ಜಿಟಿಟಿಸಿ
ಮಂಜೂರಾತಿ ದಾಖಲೆಗಳೇ ತಿಳಿಸುತ್ತವೆ ಎಂದು ವಾಗ್ದಾಳಿ ನಡೆಸಿದರು.
ನಾನು ಶಾಸಕನಾಗಿ ಆಯ್ಕೆಯಾದ ಬಳಿಕ 2013ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಕೇಂದ್ರ (ಪಿಜಿ ಸೆಂಟರ್)ವನ್ನು ಉಪ್ಪೂರಿನಲ್ಲಿ ನಿರ್ಮಿಸಬೇಕೋ ಅಥವಾ ಕಾಪು ಕ್ಷೇತ್ರದ ಬೆಳಪುವಿನಲ್ಲಿ ನಿರ್ಮಿಸಬೇಕೋ ಎಂಬ ಗೊಂದಲ ಉಂಟಾಗಿತ್ತು. ಉಪ್ಪೂರಿನ ಜಾಗ ಸ್ವಲ್ಪ ಗುಡ್ಡಗಾಡು ಹಾಗೂ ಇಳಿಜಾರು ಇದೆ ಎಂಬ ಕಾರಣಕ್ಕಾಗಿ ವಿ.ವಿ.ಯವರು ಬೆಳಪುವಿನ ಜಾಗವನ್ನು ಆಯ್ಕೆ ಮಾಡಿದರು ಎಂದು ತಿಳಿಸಿದರು.
ಆಗ ರಘುಪತಿ ಭಟ್ರು ‘ಉಪ್ಪೂರಿಗೆ ಮಂಜೂರುಗೊಂಡಿದ್ದ ಪಿಜಿ ಸೆಂಟರ್ ಬೆಳಪುವಿಗೆ
ವರ್ಗಾವಣೆಗೊಂಡಿತು. ಪ್ರಮೋದ್ ಮಧ್ವರಾಜ್ ಶಾಸಕರಾಗಿ ಅದನ್ನು ತಡೆಯುವಲ್ಲಿ
ವಿಫಲರಾಗಿದ್ದಾರೆ’ ಎಂದು ನನ್ನ ಮೇಲೆ ಟೀಕೆ ಮಾಡಿದ್ದರು.
ಹಾಗಾಗಿ ಉಪ್ಪೂರಿನಲ್ಲೊಂದು ಜಿಟಿಟಿಸಿ ಕಾಲೇಜು ಸ್ಥಾಪಿಸುತ್ತೇನೆಂದು ಅಲ್ಲಿನ ಜನತೆಗೆ ಮಾತುಕೊಟ್ಟಿದ್ದೆ. ಅದರಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರವಾಗಲಿ ಎಂಬ ನಿಟ್ಟಿನಲ್ಲಿ ಉಪ್ಪೂರಿನ ಸರ್ಕಾರಿ ಪ್ರೌಢ ಶಾಲೆಯ ಐದು ಎಕರೆ ಜಾಗವನ್ನು ಕೈಗಾರಿಕೆ ಇಲಾಖೆಗೆ ವರ್ಗಾಯಿಸಿಕೊಂಡು ಸುಮಾರು 44 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರದ ಸ್ಥಾಪನೆಗೆ ಮಂಜೂರಾತಿ ಮಾಡಿಕೊಡಿಸಿದ್ದೇನೆ. ಆ ಮೂಲಕ ಜನರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ. ಒಂದು ವೇಳೆ ನಾನೇ ಶಾಸಕನಾಗಿ ಮುಂದುವರಿಯುತ್ತಿದ್ದರೆ, ಈ ವರ್ಷದ ಜೂನ್ ತಿಂಗಳಲ್ಲಿಯೇ ಕಾಲೇಜು ಆರಂಭವಾಗುತ್ತಿತ್ತು ಎಂದರು.
ನಬಾರ್ಡ್‌ನಿಂದ ಸಾಲ ಪಡೆದು ಕಾಲೇಜು ನಿರ್ಮಿಸಲಾಗಿದೆ. ನಬಾರ್ಡ್ ಕೇಂದ್ರ
ಸರ್ಕಾರಕ್ಕೆ ಸೇರಿದ ಸಂಸ್ಥೆ ಎಂದು ಶೋಭಾ ವಾದ ಮಾಡುತ್ತಿದ್ದಾರೆ. ಆದರೆ ನಬಾರ್ಡ್
ರಾಜ್ಯ ಸರ್ಕಾರದ ಕ್ಯಾಬಿನೆಟ್ ಗ್ಯಾರಂಟಿ ಮೇಲೆ ಸಾಲದ ರೂಪದಲ್ಲಿ ಅನುದಾನ ಕೊಡುವುದೇ ವಿನಾ ಪುಕ್ಸಟ್ಟೆ ಕೊಡಲ್ಲ. ಅಲ್ಲದೆ, ಸಾಲವನ್ನು ರಾಜ್ಯ ಸರ್ಕಾರವೇ ಮರುಪಾವತಿ ಮಾಡುತ್ತದೆ. ಇದನ್ನು ಶೋಭಾ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜಿಟಿಟಿಸಿ ಕಾಲೇಜು ನಾವು ಮಾಡಿದ್ದೇವೆಂದು ಹೇಳುವುದನ್ನು ಬಿಟ್ಟುಬಿಡಿ. ನಿಮಗೆ
ಸಾಧ್ಯವಾದರೆ ಪ್ರೌಢಶಾಲೆಯ ಆಟದ ಮೈದಾನಕ್ಕೆ ಶಾಸಕ ಹಾಗೂ ಸಂಸದರ ನಿಧಿಯಿಂದ ತಲಾ 10 ಲಕ್ಷ ಅನುದಾನ ಮಂಜೂರು ಮಾಡಿ ಎಂದು ಕೀಚಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ದಿನಕರ ಪೂಜಾರಿ ಹೇರೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮುಖಂಡ ಜನಾರ್ದನ ಭಂಡಾರ್ಕರ್ ಇದ್ದರು.