ಮೀನಿನ ಉತ್ಪನ್ನಗಳಿಗೆ ಜಿಎಸ್ ಟಿ ಬರೆ… ಆಗಸ್ಟ್1 ರಿಂದ ಅನಿರ್ದಿಷ್ಟಾವಧಿ ಉತ್ಪನ್ನ ಸ್ಥಗಿತ
ಮಂಗಳೂರು : ಮೀನಿನ ಪೌಡರ್ (ಫಿಶ್ ಮಿಲ್ )ಮಾರಾಟಕ್ಕೆ ಸಂಬಂಧಿಸಿ ಜಿಎಸ್‌ಟಿ ಇಲಾಖೆಯು ಉತ್ಪಾದಕ ಮೇಲೆ ತೆರಿಗೆ ವಂಚನೆ ಪ್ರಕರಣ ದಾಖಲಿಸುವ ಬೆದರಿಕೆ ಜತೆಗೆ ಕೆಲ ಉದ್ಯಮಿಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಮೀನು ಪೌಡರ್ ಉತ್ಪಾದಕರು ಆಗಸ್ಟ್ 1 ರಿಂದ ಅನಿರ್ದಿಷ್ಟಾವಧಿ ಉತ್ಪನ್ನ ಸ್ಥಗಿತಕ್ಕೆ ನಿರ್ಧರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೀನು ಪೌಡರ್ ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಭಾರತದಲ್ಲಿ ಸುಮಾರು 56 ಮೀನು ಪೌಡರ್ ಉತ್ಪಾದನಾ ಘಟಕಗಳಿದ್ದು, ಕರ್ನಾಟದಲ್ಲೇ ೩೪ ಘಟಕಗಳಿವೆ. ಮೀನುಗಾರರ ಶೇ.70ರಷ್ಟು ಮೀನುಗಳು ಈ ಘಟಕಗಳಿಗೆ ಬರುತ್ತವೆ. ಘಟಕಗಳು ಸುಮಾರು 20,000 ಕೋಟಿ ರೂ. ವ್ಯವಹಾರವನ್ನು ಹೊಂದಿದ್ದು, ಸುಮಾರು 30,000ಕ್ಕೂ ಅಧಿಕ ಮಂದಿ ಈ ಘಟಕಗಳಲ್ಲಿ ನೇರವಾಗಿ ಉದ್ಯೋಗಿಗಳಾಗಿದ್ದಾರೆ. ಇದೀಗ ಜಿಎಸ್‌ಟಿ ಮೂಲಕ ಉದ್ದಿಮೆದಾರರಿಗೆ ಕಿರುಕುಳ ನೀಡುವುದು ಸರಿಯಲ್ಲ. ಕಳೆದ ಎಂಟು ತಿಂಗಳಿನಿಂದ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಸಂಬಂಧಪಟ್ಟ ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗಿದೆ. ಆದರೆ ಯಾವುದೇ ಪರಿಹಾರ ಆಗಿಲ್ಲ. ಹಾಗಾಗಿ ಉದ್ದಿಮೆದಾರರು ಉತ್ಪಾದನೆ ಸ್ಥಗಿತಗೊಳಿಸಲು ಸಂದರ್ಭದಲ್ಲಿ ಎಲ್ಲಾ ಬಂದರಿನ ಮೀನುಗಾರರ ಸಂಘದವರು, ಆಳ ಸಮುದ್ರ ಮೀನುಗಾರಿಕೆ ಮತ್ತು ಮೀನು ಕತ್ತರಿಸುವ ಶೆಡ್‌ಗಳವರು, ಮಂಜುಗಡ್ಡೆ ಘಟಕದವರು, ವಾಹನ ಚಾಲಕರು ಮತ್ತು ಮಾಲೀಕರು ಸಹಕರಿಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದರು.
ಬಳಿಕ ಮಾತನಾಡಿದ ಆನಂದ್ ಸಿ ಕುಂದರ್ ಭಾರತದಾದ್ಯಂತ ಕೇಂದ್ರ ಅಬಕಾರಿ ಮತ್ತು ವ್ಯಾಟ್‌ನಿಂದ ತೆರಿಗೆ ವಿನಾಯಿತಿ ಪಡೆದಿದ್ದ ಮೀನಿನ ಪೌಡರ್ ಮೇಲೆ ಇದೀಗ ಜಿಎಸ್‌ಟಿ ಜಾರಿಗೊಂಡ ಬಳಿಕ ಅವಧಿಯಿಂದ ಅನ್ವ್ಯವಾಗುವಂತೆ ಜಿಎಸ್‌ಟಿ ಪಾವತಿಸುವಂತೆ ಬೆದರಿಕೆ ಹಾಕಲಾಗುತ್ತಿದೆ. ಸುಮಾರು ಎರಡು ವರ್ಷಗಳ ಅವಧಿ ಈ ತೆರಿಗೆ ಮೊತ್ತ ಕೋಟ್ಯಂತರ ರೂ.ಗಳಾಗಿದ್ದು, ಕೆಲ ಉದ್ಯಮಿಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು ಮೂಲಕ ವ್ಯವಹಾರಕ್ಕೆ ಅಡ್ಡಿಪಡಿಸಲಾಗಿದೆ. ಇದರಿಂದ ಮೀನು ಪೌಡರ್ ಉದ್ದಿಮೆದಾರರು ಸಮಸ್ಯೆ
ಬಗೆಹರಿಯುವವರೆಗೆ ನಾಳೆಯಿಂದ ಅನಿರ್ದಿಷ್ಟಾವಧಿ ಉತ್ಪನ್ನ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಸಂಘದ, ಎಂ.ಕೆ. ಬಾಲರಾಜ್, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು