“ಮತ್ತೆ ಕಲ್ಯಾಣ” ವಚನ ಸಿದ್ದಾಂತ ವಿರುದ್ಧ ಹೊಂದಿದವರು ಭಾಗವಹಿಸುವುದರಿಂದ ಭಾಗವಹಿಸಲ್ಲ: ಕೆ.ನೀಲಾ

ಉಡುಪಿ: ಅಗಸ್ಟ್ 2 ರಂದು ನಡೆಯಲಿರುವ  ‘ಮತ್ತೆ ಕಲ್ಯಾಣ’ ದ ಅಭಿಯಾನಕ್ಕೆ ಮಂಗಳೂರು ಮತ್ತು ಉಡುಪಿಯಲ್ಲಿ ವಚನ ತತ್ವಕ್ಕೆ ವಿರುದ್ಧವಿರುವ ಸಿದ್ಧಾಂತದ ಮೂಡುಬಿದ್ರೆಯ ಮೋಹನ ಆಳ್ವ ಮತ್ತು ಶಾಸಕ ರಘುಪತಿ ಭಟ್ ಒಳಗೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ಮಸಿದ್ಧಾಂತವನ್ನೇ ಪುನರ್ ಸ್ಥಾಪಿಸಲೆಂದೇ ಟೊಂಕ ಕಟ್ಟಿ ನಿಂತಿರುವ ಸಂಘಪರಿವಾರ ಅರ್ಥಾತ್ ವಿಶ್ವ ಹಿಂದೂ ಪರಿಷತ ಮತ್ತು ಬಿಜೆಪಿಯ ಶಾಸಕರು ಇವರುಗಳೊಂದಿಗೆ ವಚನಸಿದ್ಧಾಂತಿಗಳಾದವರಿಗೆ ವೇದಿಕೆ ಹಂಚಿಕೊಳ್ಳಲಾಗದು ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕೆ. ನೀಲಾ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋಮುವಾದಿ ಸಂಘಪರಿವಾರದ ಯಾವುದೇ ತತ್ವ-ಸಿದ್ಧಾಂತಗಳೊಂದಿಗೆ ವಚನ ಸಿದ್ಧಾಂತವನ್ನು ಸಮೀಕರಿಸಲಾಗದು. ಭಾರತವು ಚಾತುರ್ವರ್ಣ ವ್ಯವಸ್ಥೆಯಲ್ಲಿ ನಲುಗುತ್ತಿರುವ ಹೊತ್ತಿನಲ್ಲಿ ಬಸವಾದಿ ಶರಣರು ಸಮತೆಯ ತತ್ವವನ್ನು ಕಟ್ಟಿಕೊಟ್ಟಿದ್ದಾರೆ. ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರಶ್ನಿಸಿ ದಯೆಯೇ ಧರ್ಮದ ಮೂಲ ಎಂಬುದನ್ನು ಮನನ ಮಾಡಿಸಿದ್ದಾರೆ. ಇಂತಹ ವಚನ ಚಳುವಳಿಯ ಮಹತಿಯನ್ನು ನುಡಿಯೊಳಗಾಗಿ ನಡೆಯಬೇಕಾದ ಹೊಣೆಯು ಎಲ್ಲ ವಿವೇಕವಂತರ ಮೇಲಿದೆ. ಇಂತಹ ಸಂದರ್ಭದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನವು ನಡೆಯುತಿದೆ.

ಖಂಡಿತ ಇದೊಂದು ಮಹತ್ವದ ಅಭಿಯಾನವಾಗಿರುವುದರಿಂದಲೇ ನಾಡಿನ ಪ್ರಜ್ಞಾವಂತರು ಕೈಜೋಡಿಸಿದ್ದಾರೆ. ಇದೇ ಹೊತ್ತಿನಲ್ಲಿ ನಾವು ಮುಟ್ಟುವ ಗುರಿ ಎಷ್ಟು ಸ್ಪಷ್ಟವಾಗಿ ಇರಬೇಕೊ ನಡೆಯುವ ದಾರಿಯೂ ಅಷ್ಟೇ ಪಾರದರ್ಶಕ ವಾಗಿರಬೇಕು. “ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ಮರೆತರೆ ಹಿಡಿದಿರ್ಪ ಲಿಂಗ ಘಟಸರ್ಪ ನೋಡಾ” ಎನ್ನುತ್ತಾರೆ ಬಸವಣ್ಣನವರು. ಅಂತೆಯೇ ನಡೆ ನುಡಿಯಲ್ಲಿ ಬಸವ ತತ್ವ ಸಾಕ್ಷಾತ್ಕಾರವಾಗುತದೆ.  ಸನಾತನ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು, ದಲಿತರನ್ನು, ಹಿಂದುಳಿದವರನ್ನು ಮಹಿಳೆಯರನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡುತ್ತಿರುವ ಸಂಘಪರಿವಾರದ, ಯಾವುದೇ ಸಂಘಟನೆಯ ಕಾರ್ಯಕರ್ತರೊಂದಿಗೆ ಸಭೆಯನ್ನು ಹಂಚಿಕೊಳ್ಳುವುದು ಬಸವ ಪರಂಪರೆಗೆ ಮಾಡುವ ದ್ರೋಹವಾಗುವುದು ಎಂಬುದು ನನ್ನ ನಂಬಿಕೆಯಾಗಿದೆ.

ಸಂಘ ಪರಿವಾರವೆಂದರೆ ಕರ್ಮಸಿದ್ಧಾಂತ, ಚಾತುರ್ವರ್ಣ ವ್ಯವಸ್ಥೆ, ಪುರೋಹಿತಶಾಹಿ ಅಲ್ಲದೇ ಮತ್ತೇನೂ ಅಲ್ಲ. ವೇದಕ್ಕೆ ಒರೆಯನಿಕ್ಕಿ ಶಾಸ್ತ್ರಕ್ಕೆ ನಿಗಳವನಿಕ್ಕಿ ವಚನ ತತ್ವದ ಮೌಲ್ಯ ಎತ್ತಿ ಹಿಡಿಯಬೇಕಾದ ಈ ಸಂದರ್ಭ ಇದಾಗಿದೆ. ಕೋಮುವಾದಿ ವ್ಯಕ್ತಿ ಶಕ್ತಿ ಸಂಘಟನೆಗಳಿಂದ ‘ಮತ್ತೆ ಕಲ್ಯಾಣ’ ವೇದಿಕೆಯು ಗಾವುದ ಗಾವುದ ದೂರ ಉಳಿಯಬೇಕೆಂದು ವಿನಂತಿಸುತ್ತೇನೆ. ಉಡುಪಿಯಲ್ಲಿ ದಿ. 2.8.2019 ರಂದು ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಬರಲು ಒಪ್ಪಿಕೊಂಡಿದ್ದೇನೊ ಹೌದು. ಇಂಥವರೆಲ್ಲ ‘ಮತ್ತೆ ಕಲ್ಯಾಣ ‘ ದೊಂದಿಗೆ ಇರುವರು ಎಂಬ ಅಂದಾಜೂ ನಮಗಿರಲಿಲ್ಲ. ಈಗ ನೋಡಿದರೆ ವಚನ ಸಿದ್ಧಾಂತದ ವಿರೋಧಿಗಳೆನಿಸಿಕೊಂಡವರು ಏನಕೇನ ಕಾರಣದಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಉಡುಪಿಯ ಈ  ಕಾರ್ಯಕ್ರಮದಿಂದ ದೂರ ಇರಲು ನಿರ್ಧರಿಸಿದ್ದೇನೆ.

Leave a Reply

Your email address will not be published. Required fields are marked *

error: Content is protected !!