ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ : ದರ್ಶನ್ ಪುಟ್ಟಣ್ಣಯ್ಯ ಆರೋಪ
ಮಡಿಕೇರಿ: ಗ್ರಾಮಗಳಲ್ಲಿ ಕಬ್ಬು ಬೆಳೆ ಒಣಗಿಹೋಗುತ್ತಿದ್ದು ಲಕ್ಷಾಂತರ ರೈತರು ನೀರು ಹರಿಸಿ ಎಂದು ಕೋರಿಕೊಂಡರೂ ಸರಕಾರ ಮಾತ್ರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ದೂರಿದ್ದಾರೆ.
ಉತ್ತಮ ಮಳೆಗಾಗಿ ಪ್ರಾರ್ಥಿಸಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ರೈತ ಸಂಘದ ವತಿಯಿಂದ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಈಗಾಗಲೇ ಬೆಳೆಗೆ ನೀರು ನೀಡಿ ಎಂದು ಕೆ.ಆರ್.ಎಸ್.ಮುತ್ತಿಗೆ ಹೋರಾಟವನ್ನು ನಡೆಸಿ ಸಾಕಷ್ಟು ಬಾರಿ ಮನವಿ ಮಾಡಿದರೂ ರಾಜ್ಯ ಸರಕಾರ ರೈತರ ಬೆಳೆಗಳಿಗೆ ನೀರು ಹರಿಸಿಲ್ಲ. ನೀರು ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೂ ಸರ್ಕಾರ ಸೂಕ್ತ ಉತ್ತರವನ್ನು ನೀಡುತ್ತಿಲ್ಲವೆಂದು ಟೀಕಿಸಿದರು.
ಕೆ.ಆರ್.ಎಸ್.ನಲ್ಲಿ 80 ಅಡಿ ನೀರಿದೆ. ಇದನ್ನು ಅಣೆಕಟ್ಟಿನಿಂದ ರೈತರ ಹೊಲಕ್ಕೆ ನೀಡಿ ಎಂದರೂ ಕೇಳುತ್ತಿಲ್ಲ. ಹೀಗಾಗಿ ನೀರನ್ನು ಅವಲಂಭಿಸಿರುವ ಮಂಡ್ಯ, ಮೈಸೂರು ವ್ಯಾಪ್ತಿಯ 82 ಸಾವಿರ ಎಕ್ರೆ ಕಬ್ಬಿನ ಹೊಲಗಳನ್ನು ಹೊಂದಿರುವ 41 ಸಾವಿರ ರೈತ ಕುಟುಂಬಗಳು ಕಂಗಾಲಾಗಿವೆ. 500 ಕೋಟಿ ರೂ.ಗಳಿಗೂ ಹೆಚ್ಚಿನ ಸಾಲ ಮಾಡಿ ಈ ಬೆಳೆ ಬೆಳೆಯಲಾಗಿದ್ದು ನೀರು ಹರಿಸದೇ ಇದ್ದಲ್ಲಿ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾನೆ. ರೈತರೊಂದಿಗೆ ಸರ್ಕಾರ ಮಾತುಕತೆಗೂ ಮುಂದಾಗುತ್ತಿಲ್ಲ ಎಂದೂ ದರ್ಶನ್ ಅಸಮಧಾನ ವ್ಯಕ್ತಪಡಿಸಿದರು.