ತಲಕಾವೇರಿ ಅರಣ್ಯದಲ್ಲಿ ಪತಿಯ ಕೊಲೆಗೈದವಳಿಗೆ ಜೀವಾವಧಿ ಶಿಕ್ಷೆ

ಮಡಿಕೇರಿ: ಪವಿತ್ರ ಕ್ಷೇತ್ರ ತಲಕಾವೇರಿಯ ಅರಣ್ಯ ಪ್ರದೇಶದಲ್ಲಿ ಪತಿಯನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿ. ವೀರಭದ್ರಪ್ಪ ಮಲ್ಲಾಪುರ ತೀರ್ಪು ನೀಡಿದ್ದಾರೆ. ಬೆಂಗಳೂರು ಮೂಲದ ನಿವಾಸಿ, ಪಿ. ಆಶಾ ಎಂಬಾಕೆಯೇ ಶಿಕ್ಷೆಗೊಳಗಾದ ಅಪರಾಧಿ, ಪ್ರಕರಣದ ಕುರಿತು ಸರಕಾರಿ ಅಭಿಯೋಜಕಿ ಕೃಷ್ಣವೇಣಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ:

ಶಿಕ್ಷೆಗೆ ಒಳಗಾದ ಆಶಾ ತನ್ನ ಪತಿ ಲಿಂಗರಾಜು, ಅತ್ತೆ ಪಟಾಲಮ್ಮ, ಮಾವ ಮರಿಸೋಮಪ್ಪ ಅವರುಗಳೊಂದಿಗೆ ಬೆಂಗಳೂರಿನ ಮಾರೇನ ಹಳ್ಳಿ, ವಿಜಯನಗರದಲ್ಲಿ ವಾಸವಾಗಿದ್ದಳು. 2016ರ ಜೂನ್ 24 ರಂದು ಪತಿ ಲಿಂಗರಾಜುನನ್ನು ಕರೆದುಕೊಂಡು ಭಾಗಮಂಡಲದ ತಲಕಾವೇರಿಗೆ ಬಂದಿದ್ದಳು. ಬಳಿಕ ತಲಕಾವೇರಿಯ ಅರಣ್ಯ ಪ್ರದೇಶದಲ್ಲಿ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕೆಂದು ಆತನ ಶರ್ಟ್ ಅನ್ನು ಬಿಚ್ಚುವಂತೆ ಹೇಳಿದ್ದಳು. ಆತ ನೆಲದ ಮೇಲೆ ಮಲಗಿದಾಗ ತನ್ನ ವ್ಯಾನಿಟಿ ಬ್ಯಾಗ್‌ನಿಂದ ಚಾಕನ್ನು ತೆಗೆದು ಪತಿ ಲಿಂಗರಾಜುವಿನ ಕುತ್ತಿಗೆಯನ್ನು ಕತ್ತರಿಸಿ ಕೊಲೆ ಮಾಡಿದ್ದಳು. ಬಳಿಕ ಭಾಗಮಂಡಲಕ್ಕೆ ಬಂದು ಅಲ್ಲಿಂದ ಖಾಸಗಿ ಬಸ್‌ನಲ್ಲಿ ಮಡಿಕೇರಿಗೆ ಆಗಮಿಸಿ ಹಾಸನ ಅರಸೀಕೆರೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಳು.

ಪವಿತ್ರ ಕ್ಷೇತ್ರ ತಲಕಾವೇರಿ ಕುಂಡಿಕೆಯ ಕೆಳ ಭಾಗದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕುತ್ತಿಗೆ ಕುಯ್ದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಕಂಡು ಕೊಡಗು ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಪ್ರಕರಣದ ಕುರಿತು ದೂರು ದಾಖಲಿಸಿಕೊಂಡ ಭಾಗಮಂಡಲ ಪೊಲೀಸರು ಮೃತ ವ್ಯಕ್ತಿಯ ಮೂಲ ಪತ್ತೆಗೆ ಮುಂದಾದಾಗ ಆತ ಬೆಂಗಳೂರಿನ ಮಾರೇನ ಹಳ್ಳಿ, ವಿಜಯನಗರ ನಿವಾಸಿ ಲಿಂಗರಾಜು ಎಂಬುದು ಖಾತ್ರಿಯಾಗಿತ್ತು. ದೇವಾಲಯಕ್ಕೆ ಬಂದು ಹೋದವರ ಬಗ್ಗೆ ಪೊಲೀಸರು ಅಲ್ಲಿದ್ದ ಸಿ.ಸಿ.ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಮೃತ ವ್ಯಕ್ತಿ ತನ್ನ ಪತ್ನಿ ಪಿ. ಆಶಾ ಎಂಬಕೆಯೊಂದಿಗೆ ಬಂದಿರುವುದು ಕಂಡು ಬಂದಿತ್ತು.

ಬಳಿಕ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಆಕೆಯ ವಿರುದ್ದ ಕೊಲೆ ಪ್ರಕರಣದ ಕುರಿತು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶರಾದ ವಿ. ವೀರಭದ್ರಪ್ಪ ಮಲ್ಲಾಪುರ ಅವರು, ಆರೋಪಿ ಆಶಾ ಪತಿಯನ್ನು ಕೊಲೆಗೈದಿರುವುದು ಶಿಕ್ಷಾರ್ಹ ಅಪರಾಧವೆಂದು ತಿಳಿಸಿ ಶಿಕ್ಷೆ ಪ್ರಕಟಿಸಿದರು. ಆಶಾಳಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು

Leave a Reply

Your email address will not be published. Required fields are marked *

error: Content is protected !!