ಸಾಲಗಾರರಿಗೆ ಶುಭ ಸುದ್ದಿ ನೀಡಿದ ಎಸ್‌ಬಿಐ… ಸಾಲ, ಠೇವಣಿಗಳ ಬಡ್ಡಿದರ ಇಳಿಕೆ…

ಹೊಸದಿಲ್ಲಿ: ದೇಶದ ಅತಿ ದೊಡ್ಡ ಬ್ಯಾಂಕಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸೋಮವಾರ ಬೆಳಗ್ಗೆಯೇ ವಿವಿಧ ಅವಧಿಯ ವೆಚ್ಚ ಆಧಾರಿತ ಸಾಲಗಳ ಮೇಲಿನ ಬಡ್ಡಿ ದರ (ಎಂಸಿಎಲ್‌ಆರ್‌) ವನ್ನು ಇಳಿಸಿದೆ. ಇದು ಎಲ್ಲ ಅವಧಿಯ ಸಾಲಗಳಿಗೂ ಅನ್ವಯವಾಗಲಿದ್ದು, ಬಡ್ಡಿದರದಲ್ಲಿ 10 ಮೂಲಾಂಶಗಳಷ್ಟು ಕಡಿಮೆಯಾಗಲಿದೆ (1 ಮೂಲಾಂಶ = 0.01%) . ನಾಳೆಯಿಂದಲೇ (ಸೆಪ್ಟೆಂಬರ್‌ 10) ಪರಿಷ್ಕೃತ ಬಡ್ಡಿ ದರ ಅನ್ವಯವಾಗಲಿದ್ದು, ಪರಿಷ್ಕೃತ ದರದಂತೆ ಶೇ.8.25ರಷ್ಟಿದ್ದ ‘ಎಂಎಲ್‌ಸಿಆರ್‌’ ಶೇ.8.15ಕ್ಕೆ ಇಳಿಯಲಿದೆ.

ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸೆಕ್ಟರ್ ಎಸ್‌ಬಿಐ ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ವಿವಿಧ ಅವಧಿಯ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಕಡಿತ ಮಾಡಿದೆ. ಜೊತೆಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಇಳಿಸಿದ್ದು, ಹೊಸ ದರಗಳು ನಾಳೆಯಿಂದಲೇ (ಸೆ.10) ಜಾರಿಯಾಗಲಿವೆ.

ಏ.1ರಿಂದ ಎಂಸಿಎಲ್‌ಆರ್‌ ಸಾಲ ಪದ್ಧತಿ ಏನಿದು ಎಂಸಿಎಲ್‌ಆರ್‌ ?

ಬಡ್ಡಿ ದರವನ್ನು ಲೆಕ್ಕಾಚಾರ ಮಾಡುವ ಹೊಸ ವಿಧಾನ ಈ ಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌. ಎಲ್ಲಾ ಬ್ಯಾಂಕುಗಳು ಈ ನಿಯಮವನ್ನು ಅಳವಡಿಸಿಕೊಳ್ಳಲು ಆರ್‌ಬಿಐ ಸೂಚನೆ ನೀಡಿದ್ದು, ಕಳೆದ ಏಪ್ರಿಲ್‌ನಿಂದ ಅನುಮೋದನೆ ಪಡೆದ ಎಲ್ಲಾ ಗೃಹ ಸಾಲಕ್ಕೆ ಇದು ಅನ್ವಯವಾಗುತ್ತದೆ. ಈ ಹಿಂದೆ ಪ್ರತಿ ಬ್ಯಾಂಕು ತನ್ನ ಬೇಸ್‌ ರೇಟ್‌ ಆಧಾರದಲ್ಲಿ ಬಡ್ಡಿ ನಿಗದಿ ಮಾಡುತ್ತಿತ್ತು. ಬೇಸ್‌ ಆಧಾರ ಮತ್ತು ಸಾಲದ ಮೊತ್ತದ ಮೇಲೆ ಒಂದಿಷ್ಟು ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಡ್ಡಿ ಲೆಕ್ಕ ಹಾಕಲಾಗುತ್ತಿತ್ತು. ಲಾಭದ ಲೆಕ್ಕಾಚಾರವು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಗ್ರಾಹಕನ ಮರು ಪಾವತಿಯ ರಿಸ್ಕ್‌ ಅಂಶವು ಕೂಡ ಸೇರುತ್ತದೆ. ಉದಾಹರಣೆ ಬೇಸ್‌ ರೇಟ್‌ ವಾರ್ಷಿಕ ಶೇ. 9 ಆಗಿದ್ದರೆ, ಬಡ್ಡಿ ದರವು ಸಾಮಾನ್ಯವಾಗಿ ಶೇ. 9.25ರಷ್ಟಿರುತ್ತಿತ್ತು. ಎಂಸಿಎಲ್‌ಆರ್‌ ವ್ಯವಸ್ಥೆಯು ಆರ್‌ಬಿಐ ನೀತಿಯಿಂದ ಆಗುವ ಬಡ್ಡಿ ಇಳಿಕೆಯ ಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಲು ನೆರವಾಗಿದೆ. ಅಂದರೆ ಒಂದು ವೇಳೆ ಠೇವಣಿಯ ಬಡ್ಡಿಯನ್ನು ಬ್ಯಾಂಕು ಕಡಿಮೆ ಮಾಡಿದರೆ, ಆಗ ಸಹಜವಾಗಿಯೇ ಬ್ಯಾಂಕುಗಳ ವೆಚ್ಚ ತಗ್ಗುವುದರಿಂದ ಸಾಲದ ಮೇಲಿನ ಬಡ್ಡಿಯನ್ನೂ ಇಳಿಕೆ ಮಾಡಲೇಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!