ಉತ್ತಮ ಸಂಸ್ಕಾರ ಮತ್ತು ಸದಭಿಪ್ರಾಯಗಳು ಅತೀ ಅವಶ್ಯಕ : ಮಹೇಶ್ ಶೆಟ್ಟಿ
ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ: ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಶುಕ್ರವಾರದಂದು ಕಾಲೇಜಿನ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ಮಿಲಾಗ್ರಿಸ್ ಹಳೇವಿದ್ಯಾರ್ಥಿ (ಎನ್ ಆರ್ ಐ) ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಲೇಜಿನ 1986-87 ನೇ ಸಾಲಿನ ಹಳೇ ವಿದ್ಯಾರ್ಥಿಯಾದ ಶ್ರೀ ಮಹೇಶ್ ಶೆಟ್ಟಿ, ಚೆರ್ಮನ್ ನೀಮಸ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಬೇಲೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಚಟುವಟಿಕೆಗಳು ಮಾತ್ರವಲ್ಲದೆ ಉತ್ತಮ ಸಂಸ್ಕಾರ ಮತ್ತು ಸದಭಿಪ್ರಾಯಗಳು ಅತೀ ಅವಶ್ಯಕ ಎಂಬುದನ್ನು ತಿಳಿಸಿದರು. ಅಲ್ಲದೆ ಒಂದು ಉತ್ತಮ ಗುರಿಯೊಂದಿಗೆ ಅದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿ ಹಿರಿಯರನ್ನು ಶಿಕ್ಷಕರನ್ನು ಗೌರವಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಹೇಶ್ ಶೆಟ್ಟಿ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಫಿಲಿಪ್ ಫುರ್ಟಾಡೋ ಕಾಲೇಜಿನ ಹಿತಚಿಂತಕರು ಅತಿಥಿಗಳಾಗಿ ಭಾಗವಹಿಸಿದ್ದರು. ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗುರುಗಳಾದ ಡಾ ಜೆರಾಲ್ಡ್ ಐಸಾಕ್ ಲೋಬೋ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಆರ್ಥಿಕ ಹಿನ್ನಡೆಯಿಂದ ಶಿಕ್ಷಣ ಪಡೆಯುವಲ್ಲಿ ವಂಚಿತರಾಗುವುದನ್ನು ನಿಲ್ಲಿಸಿ ಉತ್ತಮ ಶಿಕ್ಷಣ ಪಡೆಯುವಂತೆ ಮಾಡುವುದು ಅಲ್ಲದೆ ನಮ್ಮ ಕಾಲೇಜಿನ ಹಳೇವಿದ್ಯಾರ್ಥಿಗಳಿಗೆ ತಾವು ಕಲಿತ ಶಿಕ್ಷಣ ಸಂಸ್ಥೆಯ ಮೇಲಿರುವ ಪ್ರೀತಿ ಗೌರವ ಇನ್ನಷ್ಟು ಹೆಚ್ಚಲಿ ಎಂದು ಆಶಿಸುತ್ತಾ ಹಳೇ ವಿದ್ಯಾರ್ಥಿಗಳ ಶ್ರಮ ತ್ಯಾಗವನ್ನು ಕೊಂಡಾಡಿದರು.
ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಫಾದರ್ ಲಾರೆನ್ಸ್ ಡಿಸೋಜ ಇವರು ಉಪಸ್ಥಿತರಿದ್ದು ಇಂದು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಮುಂದೆ ಉತ್ತಮ ಸ್ಥಾನವನ್ನು ಅಲಂಕರಿಸಿ ಇನ್ನಿತರ ವಿದ್ಯಾರ್ಥಿಗಳಿಗೆ ನೆರವಾಗಬೇಕು, ಹಳೇವಿದ್ಯಾರ್ಥಿಗಳು ಯಾವುದೇ ಸಂಸ್ಥೆಯ ಬೆನ್ನೆಲುಬು ಎಂಬುದನ್ನು ಮನಗಂಡರು. ಈ ಸಂದರ್ಭದಲ್ಲಿ ಹಳೇವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸುಮಾರು ರೂ 6ಲಕ್ಷ ಗಳನ್ನು ಸುತ್ತಮುತ್ತಲಿನ ಪರಿಸರದ ಪದವಿಪೂರ್ವ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಹಾಗೂ 100 ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಮೂಲಕ ಹಂಚಲಾಯಿತು.
ಹಳೇವಿದ್ಯಾರ್ಥಿಸಂಘದ ಕಾರ್ಯದರ್ಶಿಯಾದ ಶ್ರೀಮತಿ ಸೋಫಿಯಾ ಡಯಾಸ್ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶೆರ್ವಿನ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವಾ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಹಳೇವಿದ್ಯಾರ್ಥಿಸಂಘದ ಅಧ್ಯಕ್ಷರಾದ ಶ್ರೀ ಸಾಲ್ವದೋರ್ ನೊರೋನ್ಹಾ ವಂದಿಸಿ, ಶ್ರೀ ಸಂದೀಪ್ ಶೆಟ್ಟಿ , ಉಪನ್ಯಾಸಕರು ಇಂಗ್ಲೀಷ್ ವಿಭಾಗ ಇವರು ಕಾರ್ಯಕ್ರಮ ನಿರೂಪಿಸಿದರು.