ಸಾಮಾನ್ಯ ಪೋಸ್ಟರ್ ಹಂಚುವವ ರಾಜ್ಯಾಧ್ಯಕ್ಷನಾಗುವುದು ಬಿಜೆಪಿಯಲ್ಲಿ ಸಾಧ್ಯ:ನಳಿನ್
ಉಡುಪಿ: ಬಿಜೆಪಿ ಸ್ವರ್ಣಯುಗದ ಕಾಲದಲ್ಲಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ಮುಂದಿನ 3 ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳವಾರ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷ ಸಿದ್ಧಾಂತ ಆಧಾರದಲ್ಲಿ ಬೆಳೆದಿದೆ. ಈ ವಿಚಾರಧಾರೆಯನ್ನು ಇನ್ನಷ್ಟು ಜನರಿಗೆ ತಲುಪಿಸಲು ವಿಶೇಷ ಆದ್ಯತೆ ನೀಡಲಾಗುವುದು. ಎಂಪಿ, ಎಂಎಲ್‌ಎಗಳನ್ನು ಸೃಷ್ಟಿಸುವುದು ಬಿಜೆಪಿ ಉದ್ದೇಶವಲ್ಲ. ಬದಲಾಗಿ ಭಾರತವನ್ನು ಉನ್ನತಸ್ಥಾನಕ್ಕೆ ಏರಿಸುವುದು ನಮ್ಮ ಗುರಿ. ಸಾಮಾನ್ಯ ಪೋಸ್ಟರ್ ಹಂಚುವ ವ್ಯಕ್ತಿಯೂ ರಾಜ್ಯಾಧ್ಯಕ್ಷನಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಪ್ರಜಾಪ್ರಭುತ್ವದ ಆಧಾರದಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ. ಇದು ಬಿಜೆಪಿ ವೈಶಿಷ್ಟೃವಾಗಿದ್ದು, ಪಕ್ಷಕಿಂತ ದೇಶ ಶ್ರೇಷ್ಠ ಎಂಬ ನಿಲುವನ್ನು ಪ್ರತಿಪಾದಿಸಲಾಗುತ್ತದೆ ಎಂದರು.
ಹೈದರಾದ್ ಕರ್ನಾಟಕವನ್ನು ಸಿಎಂ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದು, ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಸಜ್ಜನಿಕೆಯ ರಾಜಕಾರಣದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರೂ ಉನ್ನತ ಹುದ್ದೆಗೆ ಏರಲು ಸಾಧ್ಯ ಎಂಬುದಕ್ಕೆ ನಳಿನ್ ಕುಮಾರ್ ಸಾಕ್ಷಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಕಾರ್ಯಕರ್ತರ ಪರಿಶ್ರಮದ ಮೂಲಕ ಯಶಸ್ವಿಯಾಗಿ ಅನುಷ್ಠಾನವಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥೆ ಎಲ್ಲಿ ಹಾಳಾಗಿದೆ?
ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ದ.ಕ. ಜಿಲ್ಲಾಧಿಕಾರಿ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವಾತಂತ್ರಾೃನಂತ ಯಾವುದೇ ಸಭಾತ್ಯಾಗ, ಗಲಾಟೆ ಇಲ್ಲದೆ ಈ ಬಾರಿಯ ಸಂಸತ್ ಅಧಿವೇಶನ ನಡೆದಿದೆ. 37 ಮಸೂದೆಗಳು ಪಾಸಾಗಿವೆ. ವ್ಯವಸ್ಥೆ ಎಲ್ಲಿ ಹಾಳಾಗಿದೆ ಶಾಸಕ ಸುನೀಲ್ ಕುಮಾರ್ ಎಂದು ಪ್ರಶ್ನಿಸಿದರು .
ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಅಸಮಾಧಾನದ ಮಾನಸಿಕತೆ ಉಳ್ಳವರು ಮುಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ಯಾಕೆಂದರೆ ಮುಂದಿನದಿನಗಳಲ್ಲಿ ಇಂಥ ಅನೇಕ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ತಮಿಳುನಾಡಿನಲ್ಲಿ ರಾಜಕೀಯ ಸೇರಲು ಉತ್ಸುಕರಾಗಿರುವವರು ದೇಶದ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಡಿಸಿ ರಾಜೀನಾಮೆಯಿಂದ ನಮ್ಮ ನಿಲುವು ಬದಲಾಗುವುದಿಲ್ಲ ಎಂದರು.
ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ವಿಕ್ರಮಾರ್ಜುನ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲೆಗೆ ರಾಜ್ಯಾಧ್ಯಕ್ಷರಾಗಿ ಪ್ರಥಮಬಾರಿಗೆ ಆಗಮಿಸಿದ ನಳಿನ್ ಕುಮಾರ್ ಅವರನ್ನು ಹೆಜಮಾಡಿಯಲ್ಲಿ ಅದ್ದೂರಿಯಲ್ಲಿ ಸ್ವಾಗತಿಸಲಾಯಿತು. ಜೋಡುಕಟ್ಟೆಯಿಂದ ತೆರೆದ ಜೀಪ್‌ನಲ್ಲಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.