ಎರಡು ದಿನಗಳ ಮುಷ್ಕರಕ್ಕೆ ನಾಲ್ಕು ಬ್ಯಾಂಕ್ ಸಿಬ್ಬಂದಿ ಒಕ್ಕೂಟಗಳು ಕರೆ
ಚಂಡೀಗಡ: ಬ್ಯಾಂಕ್ಗಳ ವಿಲೀನದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಲು ಬ್ಯಾಂಕ್ ಅಧಿಕಾರಿಗಳ ಒಕ್ಕೂಟಗಳು ನಿರ್ಧರಿಸಿವೆ. ಇದೇ 26 ರಿಂದ ಎರಡು ದಿನಗಳ ಮುಷ್ಕರಕ್ಕೆ ನಾಲ್ಕು ಬ್ಯಾಂಕ್ ಸಿಬ್ಬಂದಿ ಒಕ್ಕೂಟಗಳು ಗುರುವಾರ ಕರೆ ಕೊಟ್ಟಿವೆ.
ಇದರಿಂದ ಬ್ಯಾಂಕಿಂಗ್ ವಹಿವಾಟಿಗೆ ದಕ್ಕೆಯಾಗುವ ಸಾಧ್ಯತೆ ಇದೆ.ಸರ್ಕಾರ ಸ್ಪಂದಿಸದೇ ಇದ್ದರೆ ನವೆಂಬರ್ ತಿಂಗಳ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.
ಬ್ಯಾಂಕ್ಗಳ ವಿಲೀನ ಮತ್ತು ಸಿಬ್ಬಂಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ಗಳು ಮುಷ್ಕರ ನಡೆಸಲಿವೆ ಎಂದು ಎಐಬಿಒಸಿನ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
‘ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ (ಎನ್ಒಬಿಒ) ಮುಷ್ಕರಕ್ಕೆ ಕರೆ ನೀಡಿವೆ’ ಎಂದು ಮಾಹಿತಿ ನೀಡಿದ್ದಾರೆ.
ವೇತನ ಪರಿಷ್ಕರಣೆ ಮತ್ತು ವಾರದಲ್ಲಿ ಐದು ದಿನ ಮಾತ್ರವೇ ಕೆಲಸದ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳನ್ನು ಒಕ್ಕೂಟ ಸರ್ಕಾರದ ಮುಂದಿಟ್ಟಿದೆ.