ನಳಿನ್‌ ಕುಮಾರ್‌ ಬಿಜೆಪಿಯ ಹಾಸ್ಯ ಕಲಾವಿದ:ರಮಾನಾಥ ರೈ

ಮಂಗಳೂರು: ನಳಿನ್‌ ಕುಮಾರ್‌ ಬಿಜೆಪಿ ಪಕ್ಷದ ಹಾಸ್ಯ ಕಲಾವಿದ. ಕೇಂದ್ರ ತನಿಖಾ ಸಂಸ್ಥೆ ಯಾರ ಸುಪರ್ದಿಯಲ್ಲಿ ಬರುತ್ತವೆ ಎಂಬ ಕನಿಷ್ಠ ತಿಳಿವಳಿಕೆ ಕೂಡಾ ಒಬ್ಬ ಸಂಸದರಾಗಿ ಅರಿವಿಲ್ಲ. ಜಿಲ್ಲೆಯ ನೆರೆ ಸಂತ್ರಸ್ತರಿಗೆ ಅವರು ಮೋಸ ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಸಾಮಾಜಿಕ ಜಾಲಾತಾಣಗಳಲ್ಲಿ ಬೇರೆ ಕೆಲಸ ಕಾರ್ಯಗಳನ್ನು ಅವಹೇಳನ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್‌ ಪಕ್ಷವು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಗಳ ಕಾರ್ಯ ವೈಖರಿಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಬಿಜೆಪಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡುತ್ತಿಲ್ಲ. ಪ್ರವಾಹದಿಂದ ಸಂತ್ರಸ್ತರಾವರಿಗೆ ಇನ್ನೂ ಕೂಡಾ ಪರಿಹಾರ ಧನ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನವು ಕೂಡಾ ಪರಿಹಾರ ಕಾರ್ಯಕ್ಕೆ ಬಂದಿಲ್ಲ. ನೆರೆ ಸಂತ್ರಸ್ತರ ಜತೆಗೆ ಸರ್ಕಾರ ಆಟ ಆಡುತ್ತಿದೆ. ತಕ್ಷಣವೇ ಪರಿಹಾರ ನೀಡದೇ ಇದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಹೇಳಿದರು.


ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಹಲವಾರು ಅಭಿವೃದ್ಧಿ ಕೆಲಸಗಳು ಆಗಿದ್ದವು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್ಲವೂ ಅಯೋಮಯವಾಗಿದೆ. ರಸ್ತೆಗಳ ಸಂಪೂರ್ಣ ಹಾಳಾಗಿವೆ. ಅಭಿವೃದ್ಧಿ ಕಡೆಗೆ ಸರ್ಕಾರ ಗಮನ ನೀಡುತ್ತಿಲ್ಲ. ರಾಜ್ಯದಲ್ಲಿ ಇರುವ ಸರ್ಕಾರಕ್ಕೆ ಯಾವುದೇ ಅಸ್ತಿತ್ವವಿಲ್ಲ, ಅದು ಸತ್ತು ಹೋಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿ ಈ  ಹಿಂದೆ ಉತ್ತಮ ಕೆಲಸ ಮಾಡಿದ್ದ ಸಸಿಕಾಂತ್‌ ಸೆಂಥಿಲ್‌ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವಂತಹ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಸೌಜನ್ಯಕ್ಕೂ ಅವರನ್ನು ಮನವೊಲಿಸುವ ಕೆಲಸ ಮಾಡಲಿಲ್ಲ ಎಂದು  ಅಸಮಾಧಾನ ಹೊರ ಹಾಕಿದರು.


ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮತೀಯ ಭಾವನೆ ಕೆರಳಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಮೋದಿ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ, ಸರಿಯಾದ ಪಾಠ ಕಲಿಸುವ ಕಾಲ ದೂರವಿಲ್ಲ. ಕಾಂಗ್ರೆಸ್‌ ಮುಖಂಡ ಡಿ.ಕೆ ಶಿವಕುಮಾರ್‌ ಅವರ ಬಂಧನದ ಹಿಂದೆ ಷಡ್ಯಂತ್ರವಿದೆ. ಮೋದಿ ಅವರು ಕೇವಲ ಚುನಾವಣೆ ಗೆಲುವಿಗಾಗಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್‌ ಮುಖಂಡ ಜೆ. ಆರ್‌. ಲೋಬೊ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹರೀಶ್‌ಕುಮಾರ್‌, ಎಐಸಿಸಿ ಸದಸ್ಯೆ ಕವಿತಾ ಸನಿಲ್‌, ಶಶಿಧರ ಹೆಗ್ಡೆ, ಸುಧೀರ್‌ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!