5 ರಾಜೀನಾಮೆ ಕ್ರಮಬದ್ಧ, 8 ರಾಜೀನಾಮೆ ಅನೂರ್ಜಿತ: ಸ್ಪೀಕರ್
ಬೆಂಗಳೂರು: ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಹದಿಮೂರು ಮಂದಿ ಶಾಸಕರ ಪೈಕಿ 5 ಮಂದಿ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದ್ದು ಇನ್ನುಳಿದ 8 ಮಂದಿ ರಾಜೀನಾಮೆ ಕ್ರಮ ಬದ್ಧವಾಗಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ. ರಾಜೀನಾಮೆ ಕ್ರಮಬದ್ಧವಾಗಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಎಂಟು ಶಾಸಕರು ಮತ್ತೊಮ್ಮೆ ಕ್ರಮ ಬದ್ಧ ರಾಜೀನಾಮೆ ಸಲ್ಲಿಸಬೇಕು ಎಂದು ಸ್ಪೀಕರ್ ಹೇಳಿದ್ದಾರೆ.
ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ, ಗೋಪಾಲಯ್ಯ,ರಾಮಲಿಂಗಾರೆಡ್ಡಿ, ನಾರಾಯಣ ಗೌಡ ರಾಜೀನಾಮೆ ಕ್ರಮ ಬದ್ಧವಾಗಿದೆ. ಇವರಲ್ಲಿ ಆನಂದ್, ನಾರಾಯಣಗೌಡ, ಪ್ರತಾಪ್ ಗೌಡ, ಅವರಿಗೆ ಇದೇ 12 ರಂದು ನನ್ನ ಮುಂದೆ ಹಾಜರಾಗಲು ತಿಳಿಸಿದ್ದೇನೆ. ಸ್ಪೀಕರ್ ರಮೇಶ್ ಕುಮಾರ್ ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರನ್ನು ಇದೇ 15 ರಂದು ಹಾಜರಾಗಲು ನೋಟಿಸ್ ನೀಡಿದ್ದೇನೆ. ಉಳಿದ ಎಂಟು ಶಾಸಕರು ಕ್ರಮ ಬದ್ಧ ರಾಜೀನಾಮೆ ನೀಡಿದ ಬಳಿಕ ಅವರನ್ನು ಕರೆಸುವ ಬಗ್ಗೆ ನಿರ್ಧರಿಸುತ್ತೇನೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಜಾರಕಿಹೊಳಿ ಮೇಲೆ ಅನರ್ಹತೆ ತೂಗುಗತ್ತಿ
ರಮೇಶ್ ಜಾರಕಿಹೊಳಿ ಮತ್ತು ಇತರ ಮೂವರು ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಕಾಂಗ್ರೆಸ್ನ ದೂರು ಇನ್ನೂ ಇತ್ಯರ್ಥವಾಗಬೇಕಿದೆ. ಅದಕ್ಕೆ ಇನ್ನಷ್ಟು ಸಾಕ್ಷ್ಯ ಗಳನ್ನು ಕೇಳಿದ್ದೇನೆ. ಈ ಬಗ್ಗೆ 11 ರಂದು ವಿಚಾರಣೆ ನಡೆಸುತ್ತೇನೆ. ಆಗ ಸಾಕ್ಷ್ಯ ನೀಡಬೇಕು ಎಂದು ತಿಳಿಸಿದರು.
ವಿಧಾನಮಂಡಲ ಅಧಿವೇಶನ 12 ರಂದೇ ಆರಂಭವಾಗುತ್ತದೆ. ಈ ಪ್ರಕರಣಕ್ಕೂ ಅಧಿವೇಶನಕ್ಕೂ ಸಂಬಂಧವಿಲ್ಲ ಎಂದೂ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರಿಗೂ ಪತ್ರ
ಇದೇ ವಿಚಾರವನ್ನು ತಿಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ. ತಮ್ಮ ಕರ್ತವ್ಯದ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ